ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇಡೀ ವಿಶ್ವದಲ್ಲಿಯೇ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ಏಕೈಕ ನಾಯಕ ನಟ ಎಂದರೇ ಕನ್ನಡದ ಡಾ.ರಾಜ್‌ಕುಮಾರ್ ಅವರು ಮಾತ್ರ ಎಂದು ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಬಣ್ಣಿಸಿದರು.ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್ ''''''''''''''''ಇದೇ ಹೊಸ ಹಾಡು'''''''''''''''' ಶೀರ್ಷಿಕೆಯಲ್ಲಿ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಭಾದಲ್ಲಿ ಏರ್ಪಡಿಸಿರುವ ಮೂರು ದಿನಗಳ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದ ಎರಡನೇ ದಿನವಾದ ಮಂಗಳವಾರ ಮೈಸೂರು ಜಯರಾಂ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ರಾಜ್‌ಕುಮಾರ್ ಅವರು ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಭಕ್ತಿಪ್ರದಾನ- ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ರೀತಿಯ ನಟರು ಹಿಂದಿ ಸೇರಿದಂತೆ ಭಾರತೀಯ ಯಾವುದೇ ಭಾಷೆಯಲ್ಲಿರಲಿ, ಇಡೀ ಪ್ರಪಂಚದಲ್ಲಿಯೇ ಇಲ್ಲ ಎಂದರು.
ಕೇವಲ ನಾಲ್ಕನೇ ತರಗತಿವರೆಗೆ ಓದಿದ್ದ ಡಾ.ರಾಜ್‌ಕುಮಾರ್ ಅವರ ಮನೆಯಲ್ಲಿ ಗ್ರಾಮ್ಯ ಭಾಷೆಯಲ್ಲಿಯೇ ಮಾತನಾಡಿದರೂ ಚಲನಚಿತ್ರಗಳಲ್ಲಿ ಅವರಷ್ಟು ಪರಿಶುದ್ಧವಾಗಿ ಕನ್ನಡವನ್ನು ಮಾತನಾಡುವ ಮತ್ತೊಬ್ಬರಿಲ್ಲ. ಜೊತೆಗೆ ಅವರ ವ್ಯಕ್ತಿತ್ವ ಕೂಡ ಅದೇ ರೀತಿ ಇತ್ತು ಎಂದರು.ಇಂತಹ ಮೇರುನಟನ ಹೆಸರಿನಲ್ಲಿ ಮೈಸೂರು ಜಯರಾಂ ಅವರು ಸಂಸ್ಥೆ ಕಟ್ಟಿಕೊಂಡು ವರ್ಷಕ್ಕೆ 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಲತಾ ಬಾಲಕೃಷ್ಣ ಮುಖ್ಯ ಅತಿಥಿಗಳಾಗಿದ್ದರು.ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತನಾಗ್, ಶಂಕರನಾಗ್ ಅಭಿನಯದ 40 iಗೀತೆಗಳನ್ನು ಮೈಸೂರು ಜಯರಾಂ, ರಾಮಚಂದ್ರು, ಯೋಗಿ, ಚಂದ್ರಶೇಖರ್, ಶ್ಯಾಮಸುಂದರ್, ಪಲ್ಲವಿ, ಟಿವಿಎಸ್ ಕುಮಾರ್, ರವಿಕುಮಾರ್, ತೇಜಸ್ವಿನಿ, ರಾಮದಾಸ್, ಅಶ್ವಿನಿ, ನಂಜುಂಡಯ್ಯ, ಶಶಿಕಲಾ, ನಂದಕುಮಾರ್ ಪ್ರಸ್ತುತಪಡಿಸಿದರು. ಸುಧೀಂದ್ರ ನಿರೂಪಿಸಿದರು.