ಉದ್ಯಮ ಆರಂಭಿಸುವ ಉದ್ದೇಶಕ್ಕಾಗಿ ಕೆಐಎಡಿಬಿಯಿಂದ ಭೂಮಿ ಪಡೆದು, ನಂತರ ಖಾಸಗಿ ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದಕ್ಕೆ ಭೂಮಿ ಮಾರಾಟ ಮಾಡಿರುವ ಆರೋಪಕ್ಕೆ ಇನ್ಫೋಸಿಸ್‌ ಸಂಸ್ಥೆ ಗುರಿಯಾಗಿದೆ. ಇನ್ಫೋಸಿಸ್‌ ಸಂಸ್ಥೆಯ ಈ ಕ್ರಮ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು : ಉದ್ಯಮ ಆರಂಭಿಸುವ ಉದ್ದೇಶಕ್ಕಾಗಿ ಕೆಐಎಡಿಬಿಯಿಂದ ಭೂಮಿ ಪಡೆದು, ನಂತರ ಖಾಸಗಿ ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದಕ್ಕೆ ಭೂಮಿ ಮಾರಾಟ ಮಾಡಿರುವ ಆರೋಪಕ್ಕೆ ಇನ್ಫೋಸಿಸ್‌ ಸಂಸ್ಥೆ ಗುರಿಯಾಗಿದೆ. ಇನ್ಫೋಸಿಸ್‌ ಸಂಸ್ಥೆಯ ಈ ಕ್ರಮ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಆನೇಕಲ್‌ ತಾಲೂಕಿನಲ್ಲಿ ಕೆಐಎಡಿಬಿಯಿಂದ ಮಂಜೂರು

ಆನೇಕಲ್‌ ತಾಲೂಕಿನಲ್ಲಿ ಕೆಐಎಡಿಬಿಯಿಂದ ಹಲವು ವರ್ಷಗಳ ಹಿಂದೆಯೇ ಇನ್ಫೋಸಿಸ್‌ಗೆ ಮಂಜೂರು ಮಾಡಲಾಗಿದ್ದ ಭೂಮಿಯ ಪೈಕಿ 53.5 ಎಕರೆ ಭೂಮಿಯನ್ನು ರಿಯಲ್‌ ಎಸ್ಟೇಟ್‌ ಸಂಸ್ಥೆಗೆ 250 ಕೋಟಿ ರು.ಗೆ ಮಾರಾಟ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನೆಟ್ಟಿಗರು ಇನ್ಫೋಸಿಸ್‌ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ, ಬೆಂಗಳೂರಿನ ಸಮಸ್ಯೆ ಕುರಿತಂತೆ ಸರ್ಕಾರವನ್ನು ಟೀಕಿಸುವ ಉದ್ಯಮಿಗಳಾದ ಮೋಹನ್‌ದಾಸ್ ಪೈ ಸೇರಿದಂತೆ ಮತ್ತಿತರರು ಇನ್ಫೋಸಿಸ್‌ ಭೂಮಿ ಮಾರಾಟದ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದ ಕುರಿತಂತೆಯೂ ಟೀಕೆ ವ್ಯಕ್ತಪಡಿಸಲಾಗುತ್ತಿದೆ.

ಕೈಗಾರಿಕಾ ಉದ್ದೇಶಕ್ಕೆ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿ 

ವರುಣ್‌ ರಾವ್‌ ಎನ್ನುವವರು ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ಫೋಸಿಸ್‌ ಸಂಸ್ಥೆ 1990/2000ನೇ ಇಸವಿಯ ಆರಂಭದಲ್ಲಿ ಕೆಐಎಡಿಬಿಯಿಂದ ಕೈಗಾರಿಕಾ ಉದ್ದೇಶಕ್ಕೆ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಿತ್ತು. ಆದರೆ, ಆ ಭೂಮಿಯಲ್ಲಿ ಆಗ ಯಾವುದೇ ಕಚೇರಿಯನ್ನು ಸ್ಥಾಪಿಸಲಿಲ್ಲ. ಅಲ್ಲದೆ, ಈವರೆಗೆ ಕಂಪನಿಗೆ ಸಂಬಂಧಿಸಿದ ಯಾವ ಉದ್ದೇಶಕ್ಕೂ ಭೂಮಿ ಬಳಸಿಲ್ಲ. ಆದರೀಗ ಆ ಭೂಮಿಯನ್ನು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ವಾರಕ್ಕೆ 70 ಗಂಟೆಗಳ ಕೆಲಸದ ಬಗ್ಗೆ ನೀತಿ ಪಾಠ ಮಾಡುವ ಇನ್ಫೋಸಿಸ್‌ ಸಂಸ್ಥಾಪಕರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ನ ಲಾವಣ್ಯ ಬಲ್ಲಾಳ್‌ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ಇನ್ಫೋಸಿಸ್‌ನ ಭೂಮಿ ಮಾರಾಟದ ಕುರಿತು ಮೌನ ವಹಿಸಿರುವ ಮೋಹನ್‌ದಾಸ್‌ ಪೈ ಮತ್ತು ಸುಧಾಮೂರ್ತಿ ವಿರುದ್ಧ ಹರಿಹಾಯ್ದಿದ್ದಾರೆ.