ಸಾರಾಂಶ
ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತಿತರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ದಾಖಲಾಗಿದ್ದ ಎಫ್‌ಐಆರ್ ರದ್ದು
ಬೆಂಗಳೂರು : ಐಐಎಸ್‌ಸಿ ನಿವೃತ್ತ ಪ್ರಾಧ್ಯಾಪಕ ಡಿ.ಸಣ್ಣ ದುರ್ಗಪ್ಪ ಅವರಿಗೆ ಜಾತಿ ಹೆಸರಿನಲ್ಲಿ ಕಿರುಕುಳ ಹಾಗೂ ತಾರತಮ್ಯ ಮಾಡಿದ ಆರೋಪ ಸಂಬಂಧ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತಿತರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಐಐಎಸ್‌ಸಿ ನಿವೃತ್ತ ಪ್ರಾಧ್ಯಾಪಕ ಡಿ.ಸಣ್ಣದುರ್ಗಪ್ಪ ಎಂಬುವವರು ಸಲ್ಲಿಸಿದ್ದ ದೂರು ಆಧರಿಸಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಕ್ರಿಸ್ ಗೋಪಾಲಕೃಷ್ಣ ಸೇರಿ ಮತ್ತಿತರ 16 ಮಂದಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಈ ಆದೇಶ ಮಾಡಿದೆ.
ಅರ್ಜಿದಾರರಿಗೆ ಕಿರುಕುಳ ನೀಡುವ ದುರುದ್ದೇಶದಿಂದ ಸಣ್ಣದುರ್ಗಪ್ಪ ದೂರು ದಾಖಲಿಸಿದ್ದಾರೆ. ದೂರುದಾರರು ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989ರ ಅಡಿ ಅಪರಾಧಗಳಾಗಿ ಪರಿಗಣಿಸಲ್ಪಡುವುದಿಲ್ಲ. ದೌರ್ಜನ್ಯದ ದೂರು ನೀಡಿರುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆದೆ ಎಂದು ತೀರ್ಮಾನಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದೆ.
ಅಲ್ಲದೆ, ಪ್ರಕರಣದ ದೂರುದಾರರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಅಡ್ವೋಕೇಟ್ ಜನರಲ್ ಅವರಲ್ಲಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ಒದಗಿಸಿದೆ.
ಐಐಎಸ್‌ಸಿ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕರಾಗಿದ್ದ ಸೇನಾಪತಿ ಕ್ರಿಸ್ ಗೋಪಾಲಕೃಷ್ಣ ಸೇರಿ ಬೋಧಕರಾದ ಗೋವಿಂದನ್ ರಂಗರಾಜನ್, ಶ್ರೀಧರ್ ವಾರಿಯರ್, ಸಂಧ್ಯಾ ವಿಶ್ವೇಶ್ವರಯ್ಯ, ಹರಿ ಕೆವಿಎಸ್, ದಾಸಪ್ಪ, ಬಲರಾಮ್ ಪಿ, ಹೇಮಲತಾ ಮಿಶಿ, ಚಟ್ಟೋಪಾಧ್ಯಾಯ ಕೆ, ವಕೀಲರಾದ ಪ್ರದೀಪ್ ಡಿ.ಸಾಹುಕಾರ್ ಮತ್ತು ಮನೋಹರನ್ ಅವರ ವಿರುದ್ಧ ಸಣ್ಣ ದುರ್ಗಪ್ಪ ಅವರು ಜಾತಿ ಹೆಸರಿನಲ್ಲಿ ತಾರತಮ್ಯ ನಡೆಸಿದ ಆರೋಪ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.
ಅದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸದಾಶಿವನಗರ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಅದರಂತೆ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ಪ್ರಶ್ನಿಸಿ ಕೆಲವು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.