ಕೊಪ್ಪಳ: ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪನೆ ವಿರುದ್ಧ ಕೊಪ್ಪಳದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಟ ದುನಿಯಾ ವಿಜಯ ಬೆಂಬಲ ಸೂಚಿಸಿದ್ದಾರೆ.

ಹಿರೇಬಗನಾಳ ಗ್ರಾಮದ ಮಹೇಶ ಎನ್ನುವವರೊಂದಿಗೆ ಮೊಬೈಲ್ ನಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಬಿಎಸ್ ಪಿಎಲ್ ಕಾರ್ಖಾನೆ ತೊಲಗಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಅಗತ್ಯವಿದ್ದರೆ ನಾನು ಬಂದು ಭಾಗವಹಿಸುವುದಾಗಿ ಹೇಳಿದ್ದಾರೆ.

ಫೆ.24 ರಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ನೇರವಾಗಿ ಭಾಗವಹಿಸಲು ನನಗೆ ಆಗುತ್ತಿಲ್ಲ. ಹೀಗಾಗಿ ನೈತಿಕವಾಗಿ ಬೆಂಬಲ ಸೂಚಿಸಿದ್ದೇನೆ. ಕೆಲಸದ ಒತ್ತಡ ಇರುವುದರಿಂದ ಈ ಬಾರಿ ಬರಲು ಆಗುತ್ತಿಲ್ಲ, ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದು ರೈತನ ಮಗನಾಗಿ ನಾನು ಹಾರೈಸುತ್ತೇನೆ ಎಂದು ಹೇಳಿ ಬೆಂಬಲ ಸೂಚಿಸಿದ್ದಾರೆ.

ಫೆ.24 ರಂದು ಕೊಪ್ಪಳ ಬಂದ್ : ಕೊಪ್ಪಳ ಬಳಿ ಸ್ಥಾಪಿಸಲು ಉದ್ಧೇಶಿಸಿರುವ ಬಿಎಸ್ ಪಿಎಲ್ ಕಾರ್ಖಾನೆ ತೊಲಗಿಸುವಂತೆ ಈಗಾಗಲೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 100 ದಿನ ಗತಿಸಿದ್ದು, ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಹೋರಾಟಕ್ಕೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಫೆ.24 ರಂದು ಕೊಪ್ಪಳ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಈ ಹೋರಾಟಕ್ಕೆ ನಟ ದುನಿಯಾ ವಿಜಯ ಸೇರಿದಂತೆ ಅನೇಕರು ಬೆಂಬಲಿಸಿದ್ದಾರೆ.

ಹಲವು ಸ್ವಾಮೀಜಿಗಳು ಭಾಗಿ: ಫೆ.24 ರಂದು ನಡೆಯುವ ಬೃಹತ್ ಹೋರಾಟದಲ್ಲಿ ಅನೇಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಸಾಣೆಹಳ್ಳಿ ಪಂಡಿತಾರಾಧ್ಯ ಶಿವಚಾರ್ಯ ಮಹಾಸ್ವಾಮೀಜಿ, ಗದಗ ತೋಂಟದಾರ್ಯಮಠದ ಸಿದ್ದರಾಮ ಮಹಾಸ್ವಾಮೀಜಿ, ಸಿದ್ದಬಸವ ಕಬೀರ ಮಹಾಸ್ವಾಮೀಜಿ, ಜಗದ್ಗುರು ಮಣಿಶಂಕರ ದೇವರು ಸೇರಿದಂತೆ ಅನೇಕ ಸ್ವಾಮೀಜಿಗಳು ಭಾಗವಹಿಸುತ್ತಿದ್ದಾರೆ.


ಇದಲ್ಲದೆ ಪರಿಸರಕ್ಕಾಗಿ ಸಂಘಟನೆಯ ಎ.ಟಿ.ರಾಮಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮಸರ ಪಾಟೀಲ್, ಕಾರ್ಯಾಧ್ಯಕ್ಷ ವೀರಸಂಗಯ್ಯ ಸೇರಿದಂತೆ ಅನೇಕ ಸಂಘಟನೆಗಳು ಮುಖಂಡರು ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಾಗವಹಿಸಲಿದ್ದಾರೆ.

20 ಗ್ರಾಮಗಳಿಂದ ಜನ: ಕಾರ್ಖಾನೆಯಿಂದ ಈಗಾಗಲೇ ಬಾಧಿತರಾಗಿ ಸಮಸ್ಯೆ ಎದುರಿಸುತ್ತಿರುವ ಸುಮಾರು 20 ಗ್ರಾಮಗಳ ಜನರು ಸ್ವಯಂ ಪ್ರೇರಿತವಾಗಿ ಆಗಮಿಸಲಿದ್ದಾರೆ. ಬಂದ್ ವೇಳೆಯಲ್ಲಿ ನಡೆಯುವ ಪ್ರತಿಭಟನಾ ರ್‍ಯಾಲಿಯಲ್ಲಿ ಬಾಧಿತ ಗ್ರಾಮಗಳ ಜನರು ತಮ್ಮ ಹಾಳಾದ ಬೆಳೆ ಸೇರಿದಂತೆ ಮೊದಲಾದವುಗಳ ಪ್ರದರ್ಶನ ಮಾಡಲಿದ್ದಾರೆ.

ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಸಹ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ತಾವು ನೇರವಾಗಿ ಭಾಗವಹಿಸುವ ಕಾಲ ಬಂದಾಗ ಖಂಡಿತವಾಗಿ ಆಗಮಿಸುತ್ತೇನೆ, ಸದ್ಯಕ್ಕೆ ನನ್ನ ಸಂಪೂರ್ಣ ಬೆಂಬಲ ಇದ್ದು, ಗವಿಮಠದಿಂದ ದಾಸೋಹ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಬಿಎಸ್ ಪಿಎಲ್ ಕಾರ್ಖಾನೆ ತೊಲಗಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಫೆ.24 ರಂದು ಕೊಪ್ಪಳ ಬಂದ್ ಗೆ ಕರೆ ನೀಡಲಾಗಿದೆ ಮತ್ತು ಅಂದು ಬೃಹತ್ ಪ್ರತಿಭಟನಾ ಮೆರವಣಿಗೆ ಸಹ ನಡೆಸಲಾಗುತ್ತದೆ. ಎಲ್ಲ ಜನಪ್ರತಿನಿಧಿಗಳಿಗೂ ಭಾಗವಹಿಸುವಂತೆ ಕೋರಲಾಗಿದೆ ಎಂದು ಹೋರಾಟ ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.

ಕೊಪ್ಪಳ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅನೇಕ ಸಂಘ, ಸಂಸ್ಥೆ, ಸಿನೆಮಾ ನಟರು, ಸ್ವಾಮೀಜಿಗಳು ಸೇರಿದಂತೆ ದೊಡ್ಡ ಪ್ರಮಾಣದ ಬೆಂಬಲ ದೊರೆಯುತ್ತಿದೆ ಎಂದು ಹೋರಾಟ ಸಮಿತಿ ಸಂಚಾಲಕ ಮಂಜುನಾಥ ಗೊಂಡಬಾಳ ತಿಳಿಸಿದ್ದಾರೆ.