ನಟ ಪ್ರಥಮ್‌ಗೆ ಜೀವ ಬೆದರಿಕೆ ಆರೋಪ: ಬೇಕರಿ ರಘು, ಯಶಸ್ವಿನಿಗೆ ಜಾಮೀನು

| Published : Aug 01 2025, 12:00 AM IST

ನಟ ಪ್ರಥಮ್‌ಗೆ ಜೀವ ಬೆದರಿಕೆ ಆರೋಪ: ಬೇಕರಿ ರಘು, ಯಶಸ್ವಿನಿಗೆ ಜಾಮೀನು
Share this Article
  • FB
  • TW
  • Linkdin
  • Email

ಸಾರಾಂಶ

ಜುಲೈ 22ರಂದು ನಟ ಪ್ರಥಮ್ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಬಿಗ್‌ಬಾಸ್‌ ಖ್ಯಾತಿಯ ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೇಕರಿ ರಘು, ಯಶಸ್ವಿನಿಗೆ ದೊಡ್ಡಬಳ್ಳಾಪುರ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಮತ್ತೊಂದೆಡೆ ದೂರುದಾರ ನಟ ಪ್ರಥಮ್, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದು, ಆರಕ್ಷಕ ನಿರೀಕ್ಷಕ ಸಾದಿಕ್‌ ಪಾಷಾ ನೇತೃತ್ವದಲ್ಲಿ ನಡೆದ ಪ್ರಕರಣದ ಸ್ಥಳ ಪರಿಶೀಲನೆಯಲ್ಲಿ ಹಾಜರಿದ್ದರು.

ಜುಲೈ 22ರಂದು ನಟ ಪ್ರಥಮ್ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ದೇವಸ್ಥಾನಕ್ಕೆ ಬಂದಿದ್ದ ಆರೋಪಿಗಳಾದ ಯಶಸ್ವಿನಿ ಮತ್ತು ಬೇಕರಿಗೆ ರಘು ಮಾರಾಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಥಮ್‌ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಜು. 29ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೀವ ಬೆದರಿಕೆ ಪ್ರಕರಣ ಹಿನ್ನೆಲೆ ಆರೋಪಿಗಳಾದ ಯಶಸ್ವಿನಿ, ಬೇಕರಿಗೆ ರಘು ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದು, ತಲಾ ₹10 ಸಾವಿರ ನಗದು, ಶ್ಯೂರಿಟಿ ಮತ್ತು ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ. ವಿಚಾರಣೆಗೆ ಹಾಜರಾದ ಪ್ರಥಮ್:

ವಿಚಾರಣೆಗೆ ಬರುವಂತೆ ಇನ್‌ಸ್ಪೆಕ್ಟರ್ ಸಾಧಿಕ್ ಪಾಷ ದೂರುದಾರ ಪ್ರಥಮ್ ಗೆ ನೋಟಿಸ್ ನೀಡಿದ್ದ ಹಿನ್ನೆಲೆ ಗುರುವಾರ ಪ್ರಥಮ್ ವಿಚಾರಣೆಗೆ ಹಾಜರಾದರು. ಸ್ಥಳ ಮಹಜರ್ ಗಾಗಿ ಅವರನ್ನು ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಬಳಿಕ ಕಾನೂನು ಪ್ರಕ್ರಿಯೆಗಳನ್ನು ನಡೆಸಿ ಕಳುಹಿಸಿದ್ದಾರೆ.

ಆರೋಪ ನಿರಾಕರಿಸಿದ ಯಶಸ್ವಿನಿ:

ಈ ಮಧ್ಯೆ ಖಾಸಗಿ ಸುದ್ದಿ ವಾಹಿನಿಗೆ ಹೇಳಿಕೆ ನೀಡಿರುವ ಯಶಸ್ವಿನಿ, ಮಹೇಶ್‌ ಎಂಬುವವರು ನನ್ನನ್ನು ಕಾರ್ಯಕ್ರಮಕ್ಕೆ ಕರೆದಿದ್ದರು. ತಾವು ಹಾಗೂ ದಾಸ ಅಲ್ಲಿಗೆ ಹೋಗಿದ್ದು ನಿಜ. ಅದೇ ಕಾರ್ಯಕ್ರಮಕ್ಕೆ ಪ್ರಥಮ್‌ ಕೂಡ ಬಂದಿದ್ದು, ಆತನೇ ನನ್ನನ್ನು ಹುಡುಕಿಕೊಂಡು ಬಂದು ಮಾತನಾಡಿಸಿದ. ಸೂರಿಅಣ್ಣ ಸಿನಿಮಾದಲ್ಲಿ ನಾನೂ ಅಭಿನಯಿಸಿದ್ದೆ. ಬೇಕರಿ ರಘು ಆ ಕಾರ್ಯಕ್ರ‌ಮಕ್ಕೆ ಬಂದೇ ಇರಲಿಲ್ಲ. ಪ್ರಥಮ್‌ ನಮ್ಮ ಜೊತೆಗೇ ಕುಳಿತು ಊಟ ಮಾಡಿದ್ದು, ಆ ಬಳಿಕ ಈ ರೀತಿ ಕ್ಷುಲ್ಲಕ ಆರೋಪ ಮಾಡಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ. ದರ್ಶನ್‌ ಮತ್ತು ನಮ್ಮ ಸ್ನೇಹ 25 ವರ್ಷಗಳದ್ದು, ದರ್ಶನ್‌ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಪ್ರಥಮ್‌ ಕೇವಲ ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದು, ಇದೆಲ್ಲಾ ದೊಡ್ಡ ನಾಟಕ. ತಾವೂ ಕೂಡ ಪ್ರಥಮ್‌ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.

ಫೋಟೋ-31ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದಲ್ಲಿ ಸ್ಥಳ ಮಹಜರು ವೇಳೆ ಪೊಲೀಸರೊಂದಿಗೆ ಹಾಜರಿದ್ದ ನಟ ಪ್ರಥಮ್.