ಸಾರಾಂಶ
ರೈತ ಚಳವಳಿಯ ಸಂಕೇತವಾದ ಹಸಿರು ಟವಲ್ ಧರಿಸಿ ಸಿಂಧಘಟ್ಟ ಗ್ರಾಮಕ್ಕೆ ಆಗಮಿಸಿದ್ದ ನಟ ವಿನೋದ್ ರಾಜ್ ತಾಯಿ, ಹಿರಿಯ ನಟಿ ಲೀಲಾವತಿ ಅವರನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.
ಕೆ.ಆರ್.ಪೇಟೆ : ತೀವ್ರ ಬರಗಾಲದ ಪರಿಣಾಮ ರಾಸುಗಳಿಗೆ ಮೇವಿಲ್ಲದೆ ಪರದಾಡುತ್ತಿದ್ದ ರೈತ ಕುಟುಂಬದ ನೆರವಿಗೆ ಧಾವಿಸಿದ ಹಿರಿಯ ನಟ ವಿನೋದ್ ರಾಜ್ ಒಂದು ಲಾರಿ ಲೋಡ್ ಮೇವನ್ನು ಉಚಿತವಾಗಿ ನೀಡಿ ರಾಸುಗಳ ಸಂರಕ್ಷಣೆಗೆ ಮುಂದಾಗಿದ್ದಾರೆ.
ತಾಲೂಕಿನ ಶೀಳನೆರೆ ಹೋಬಳಿ ಸಿಂದಘಟ್ಟ ಗ್ರಾಮದ ರೈತ ಪುಟ್ಟರಾಜು ತಮ್ಮ ರಾಸುಗಳಿಗೆ ಮೇವಿಲ್ಲದೆ ಪರದಾಡುತ್ತಿದ್ದರು. ರೈತ ಪುಟ್ಟರಾಜು ತಮ್ಮ ರಾಸುಗಳಿಗೆ ಮೇವಿಲ್ಲದೇ ತೊಂದರೆಯಲ್ಲಿ ಇರುವುದನ್ನು ತಿಳಿದು ಒಂದು ಲಾರಿ ಲೋಡ್ ಹುಲ್ಲಿನೊಂದಿಗೆ ಸಿಂಧಘಟ್ಟ ಗ್ರಾಮಕ್ಕೆ ಆಗಮಿಸಿದ ನಟ ವಿನೋದ್ ರಾಜ್ ಉಚಿತವಾಗಿ ಮೇವು ವಿತರಣೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನಲ್ಲಿ ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಮಳೆಯಿಲ್ಲದೆ ತಾಲೂಕು ಬರಪೀಡಿತವಾಗಿದೆ. ಕೆರೆ-ಕಟ್ಟೆಗಳು ಬರಿದಾಗಿವೆ. ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಹೇಮಾವತಿ ನೀರಿನಿಂದಲೂ ತಾಲೂಕಿನ ಕೆರೆ ಕಟ್ಟೆಗಳು ಭರ್ತಿಯಾಗಲಿಲ್ಲ. ಪರಿಣಾಮ ಜನ-ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿನ ಅಭಾವ ಕಾಡುತ್ತಿದೆ.
ಬೆಳೆಯಿಲ್ಲದೆ ರೈತರ ರಾಸುಗಳಿಗೆ ಮೇವಿನ ಕೊರತೆ ಎದುರಾಗಿದೆ. ತಮ್ಮ ಮನೆಯಲ್ಲಿನ ಜಾನುವಾರಗಳ ರಕ್ಷಣೆಗೆ ಅಗತ್ಯ ಮೇವು ನೀಡುವಂತೆ ರೈತ ಪುಟ್ಟರಾಜು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದರು.
ಇದನ್ನು ಗಮನಿಸಿದ ನಟ ವಿನೋದ್ ರಾಜ್ ಒಂದು ಲಾರಿ ಲೋಡ್ ಹುಲ್ಲನ್ನು ಬೇರೆ ರೈತರಿಂದ ಖರೀದಿ ಮಾಡಿ ಬಡ ರೈತನಿಗೆ ಕೊಡುಗೆಯಾಗಿ ನೀಡಿ ಹೃದಯ ಶ್ರೀಮಂತಿಕೆ ಮೆರೆದರಲ್ಲದೆ ಪುಟ್ಟರಾಜು ಅವರ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಅವರ ಕಷ್ಟ ಸುಖಗಳನ್ನು ಆಲಿಸಿದರು.
ರೈತ ಚಳವಳಿಯ ಸಂಕೇತವಾದ ಹಸಿರು ಟವಲ್ ಧರಿಸಿ ಸಿಂಧಘಟ್ಟ ಗ್ರಾಮಕ್ಕೆ ಆಗಮಿಸಿದ್ದ ನಟ ವಿನೋದ್ ರಾಜ್ ಕುಟುಂಬದ ಸದಸ್ಯರ ಅಭಿಲಾಷೆಯ ಮೇರೆಗೆ ನಗುತೈತ್ತೆ ದೈವ ಅಲ್ಲಿ ಕುಳಿತೈತೆ ಜೀವ ಇಲ್ಲಿ ವಿಧಿಯಾಟ ಕಂಡೋರ್‍ಯಾರು ಮಾನವ ಹಾಡನ್ನು ಹಾಡಿ ತಮ್ಮ ತಾಯಿ, ಹಿರಿಯ ನಟಿ ಲೀಲಾವತಿ ಅವರನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.
ದೈವಸ್ವರೂಪವಾದ ಮಾತು ಬಾರದ ಜಾನುವಾರುಗಳು ಮತ್ತು ಪ್ರಾಣಿಗಳಿಗೆ ಸಹಾಯ ಮಾಡಬೇಕು ಎಂಬುದು ನನಗೆ ನನ್ನ ತಾಯಿ ಲೀಲಾವತಿ ಅವರು ಕಲಿಸಿಕೊಟ್ಟ ಪಾಠವಾಗಿದೆ. ಜಾನುವಾರುಗಳ ಸೇವೆಗೆಂದೇ ಸುಸಜ್ಜಿತವಾದ ಒಂದು ಪಶು ಆಸ್ಪತ್ರೆಯನ್ನು ನನ್ನ ತಾಯಿ ನಿರ್ಮಿಸಿಕೊಟ್ಟಿದ್ದಾರೆ. ಪಶು, ಪಕ್ಷಿಗಳು ಹಾಗೂ ಪ್ರಾಣಿಗಳನ್ನು ಪ್ರೀತಿಸು ಎಂದು ನಾನು ನನ್ನ ತಾಯಿಯಿಂದ ಕಲಿತಿದ್ದೇನೆ. ಆದ್ದರಿಂದ ನನ್ನ ತಾಯಿಯ ಅಭಿಲಾಷಯಂತೆ ಸ್ನೇಹಿತರ ಮೂಲಕ ವಿಚಾರ ತಿಳಿದು ಸಂಕಷ್ಟದಲ್ಲಿರುವ ಬಡ ರೈತನು ತನ್ನ ಜಾನುವಾರುಗಳ ಸಂರಕ್ಷಣೆ ಮಾಡಿಕೊಳ್ಳಲು ಬೇಕಾದ ಮೇವು (ಹುಲ್ಲು) ಕೊಡಿಸುವ ಮೂಲಕ ನನ್ನ ಕೈಲಾದ ಸಹಾಯ ಮಾಡಿದ್ದೇನೆ.
- ವಿನೋದ್‌ರಾಜ್ ಹಿರಿಯ ನಟ