ಅಮ್ಮನ ನೆನೆದು ಕಣ್ಣೀರಿಟ್ಟ ನಟ ವಿನೋದ್‌ರಾಜ್..!

| Published : Dec 23 2023, 01:46 AM IST

ಸಾರಾಂಶ

ನನ್ನ ತಾಯಿ ಬದುಕಿದ್ದಾಗ ಕಿಟಕಿ ಬಳಿ ಬಂದ ಕಾಗೆಗೆ ಏನಾದರೂ ಹಾಕಿ ಎನ್ನುತ್ತಿದ್ದರು. ಇವತ್ತು ಅವ್ರ ಕಾಗೆ ರೂಪದಲ್ಲಿ ಬಂದು ಪ್ರಸಾದ ಸ್ವೀಕರಿಸಿದವು. ಆದರೆ, ನನ್ನಿಂದ ಅಮ್ಮನನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಇತ್ತೀಚೆಗಷ್ಟೇ ಮೃತಪಟ್ಟ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರಿಗೆ ಪಿಂಡ ಪ್ರದಾನ ಕಾರ್ಯಕ್ರಮವನ್ನು ಪಟ್ಟಣದ ಹೊರ ವಲಯದಲ್ಲಿರುವ ಪಶ್ಚಿಮವಾಹಿನಿಯಲ್ಲಿ ಪುತ್ರ ವಿನೋದ್‌ರಾಜ್ ನೆರವೇರಿಸಿದರು.

ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸಿ ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟ ವಿನೋದ್‌ರಾಜ್ ಅಮ್ಮನನ್ನು ನೆನೆದು ಕಣ್ಣೀರಿಟ್ಟರು. ಪೂಜಾ ಸಮಯದಲ್ಲಿ ಬಂಧುಗಳು-ಸ್ನೇಹಿತರು ಜೊತೆಗಿದ್ದರು.

ಪಿಂಡ ಪ್ರದಾನ ಕಾರ್ಯಕ್ರಮ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಬದುಕಿದ್ದಾಗ ಕಿಟಕಿ ಬಳಿ ಬಂದ ಕಾಗೆಗೆ ಏನಾದರೂ ಹಾಕಿ ಎನ್ನುತ್ತಿದ್ದರು. ಇವತ್ತು ಅವ್ರ ಕಾಗೆ ರೂಪದಲ್ಲಿ ಬಂದು ಪ್ರಸಾದ ಸ್ವೀಕರಿಸಿದವು. ಆದರೆ, ನನ್ನಿಂದ ಅಮ್ಮನನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ ಎಂದು ದುಃಖಿತರಾದರು.

ಜೀವನದಲ್ಲಿ ನನ್ನ ತಾಯಿಯನ್ನು ಬಿಟ್ಟುಕೊಡಲು ನನಗಿಷ್ಟ ಇಲ್ಲ. ನಮ್ಮ ಚಿತ್ರರಂಗದಲ್ಲಿ ಕೆಲವು ಮುಖ್ಯವಾದ ಜೀವಗಳನ್ನು ಕೂಡ ನಾವು ಕಳೆದುಕೊಂಡು ಬಿಟ್ಟೆವು. ಕೆಲವರು ಅಕಾಲಿಕ ಮರಣವನ್ನಪ್ಪಿದರು. ಅದನ್ನು ನೆನಸಿಕೊಂಡರೆ ಬಹಳ ನೋವಾಗುತ್ತದೆ. ನನ್ನ ತಾಯಿಗೆ ಶುಗರ್ ಸೇರಿದಂತೆ ಎಲ್ಲಾ ಸರಿ ಇತ್ತು. ಕಫಾ ಹೆಚ್ಚಾಗಿದ್ದರಿಂದ ಅವರಿಗೆ ಹೃದಯಾಘಾತವಾಯಿತು ಎಂದರು.

ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದ ನಟಿ ಲೀಲಾವತಿ ನೆನದು ಕಣ್ಣೀರು ಹಾಕಿದ ವಿನೋದ್ ರಾಜ್.

ಕಳೆದ ಒಂದುವರೆ ತಿಂಗಳ ಹಿಂದೆ ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ಬಂದಾಗ ನನ್ನ ತಾಯಿ ಆರೋಗ್ಯವಾಗಿದ್ದರು. ಆ ಸಮಯದಲ್ಲಿ ಅವರು ನೂರಾರು ಕಿ.ಮೀ. ಪ್ರಯಾಣ ಮಾಡಿ ಬಂದಿದ್ದರು. ಆದರೆ, ಇವತ್ತು ಅವರಿಲ್ಲ. ಅವರಿಗೆ ನಾನು ಪಿಂಡ ಪ್ರದಾನ ಮಾಡುತ್ತಿದ್ದೇನೆ ಎನ್ನುವುದನ್ನು ಜೀರ್ಣಿಸಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲ ಎಂದು ಕಣ್ಣೀರಿಟ್ಟರು.

ಈಗ ನಾನು ಏಕೆ ಅಳುತ್ತಿದ್ದೇನೆ ಎಂದರೆ ಯಾವುದೇ ಮನೆ, ಮಠಗಳಲ್ಲಿ ಹಿರಿಯರು ಇರುವುದು ಶ್ರೇಷ್ಠ. ಹಿರಿಯರಿಗೆ ಗೌರವಕೊಟ್ಟು ಹೆಜ್ಜೆ ಹಾಕೋದು ಶ್ರೇಷ್ಠ. ಹಿರಿಯರಿಲ್ಲದ ಮನೆಗಳು ದೇವರಿಲ್ಲದ ಗುಡಿಗಳಿದ್ದಂತೆ ಎಂದು ತಿಳಿಸಿದರು.