ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕ್ಯಾನ್ಸರ್ ರೋಗದ ಸಂಬಂಧ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ಅಭಿಮಾನಿಯೊಬ್ಬರ ಜೊತೆ ನಟ ಯಶ್ ಅಮೇರಿಕಾದಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿ ಸಾಂತ್ವನ ಹೇಳಿದರು.

ಶಿವಮೊಗ್ಗದ ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸುನೀಲ್ ಎಂಬುವವರ ಜೊತೆ ಮಂಗಳವಾರ ಯಶ್ ಮಾತನಾಡಿದರು.

ನಾಲ್ಕನೇ ಹಂತದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಸುನೀಲ್ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ವಿಷಯ ತಿಳಿದ ಯಶ್ ಅಮೇರಿಕಾದಿಂದ ವಿಡಿಯೋ ಕಾಲ್ ಮೂಲಕ ಕರೆ ಮಾಡಿ ಧೈರ್ಯ ತುಂಬಿದರು. ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಬೇಕು. ದೇವರು ಇದ್ದಾನೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ನಮ್ಮ ಮನೋಸ್ಥೈರ್ಯ ಗಟ್ಟಿಯಾಗಿದ್ದರೆ ಗುಣವಾಗುತ್ತದೆ. ಹೆದರಿಕೆ ಬೇಡ ಎಂದರಲ್ಲದೆ ಸುನೀಲ್ ಪತ್ನಿಯ ಜೊತೆಗೂ ಮಾತನಾಡಿ ಧೈರ್ಯ ತುಂಬಿದರು.


ಸುನೀಲ್‌ ಅವರಿಗೆ ಆರಂಭದಲ್ಲಿ ಸಮಸ್ಯೆ ಏನೆಂದು ಗೊತ್ತಾಗಿರಲಿಲ್ಲ. ಎರಡು ಕಡೆ ತೋರಿಸಿದಾಗಲೂ ಪೈಲ್ಸ್‌ ಎಂದೇ ಹೇಳಿದ್ದರು. ಮೂರನೇ ಕಡೆ ತೋರಿಸಿದಾಗ ಕ್ಯಾನ್ಸರ್‌ ಪತ್ತೆಯಾಯಿತು. ಇದೆಲ್ಲ ಖಚಿತವಾದ ಬಳಿಕ ಚಿಕಿತ್ಸೆ ಆರಂಭಿಸುವ ಹೊತ್ತಿಗೆ ಕಾಯಿಲೆ ನಾಲ್ಕನೇ ಹಂತ ತಲುಪಿತ್ತು. ದೇಹದ ಕೆಲವೆಡೆ ಹರಡಿತ್ತು. ಚಿಕಿತ್ಸೆಗಾಗಿ ಬೆಂಗಳೂರಿಗೂ ಹೋಗಿದ್ದ ಈ ಕುಟುಂಬ ಕೊನೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿ ಕುಟುಂಬವು ಸೈಟ್‌ ಗಳನ್ನು ಮಾರಿ ಚಿಕಿತ್ಸೆ ಕೊಡಿಸುತ್ತಿದೆ.

ಈ ವಿಷಯವನ್ನು ಸುನೀಲ್‌ ಯಶ್‌ಗೆ ವಿವರಿಸಿದರು. ಕುಟುಂಬದ ವಿವರ ಪಡೆದ ಯಶ್‌ ಧೈರ್ಯವಾಗಿರಿ. ಈ ಧೈರ್ಯದಿಂದಲೇ ಚಿಕಿತ್ಸೆ ಪಡೆಯಿರಿ. ಆ ಭಗವಂತನನ್ನು ಪ್ರಾರ್ಥಿಸೋಣ. ನಿಮ್ಮ ಆತ್ಮಸ್ಥೈರ್ಯದಿಂದ ಇದರಿಂದ ಹೊರ ಬರುತ್ತೀರಿ ಎಂದು ಧೈರ್ಯ ಹೇಳಿದರು.

ನನಗೆ ಸೋಮವಾರವಷ್ಟೇ ವಿಷಯ ಗೊತ್ತಾಯಿತು. ಅಮೇರಿಕಾದಲ್ಲಿ ಇದ್ದೇನೆ. ಹೀಗಾಗಿ ಇಂದು ನಿಮ್ಮ ಜೊತೆ ಮಾತನಾಡಿದೆ. ಧೈರ್ಯವಾಗಿರಿ ಎಂದರು.