ನಟಿ ರನ್ಯಾ ರಾವ್‌ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗಲಿದೆ: ಸಲೀಂ ಅಹ್ಮದ್

| Published : Mar 17 2025, 12:30 AM IST

ನಟಿ ರನ್ಯಾ ರಾವ್‌ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗಲಿದೆ: ಸಲೀಂ ಅಹ್ಮದ್
Share this Article
  • FB
  • TW
  • Linkdin
  • Email

ಸಾರಾಂಶ

ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ವಿಧಾನಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ಹುಬ್ಬಳ್ಳಿ: ನಟಿ ರನ್ಯಾ ರಾವ್ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಇತರ ಸಂಸ್ಥೆಗಳು ಸಮಗ್ರವಾಗಿ ತನಿಖೆ ನಡೆಸುತ್ತಿವೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಮೇಲೆ ಸೂಕ್ತ ಕ್ರಮವಾಗಲಿದೆ. ಯಾವುದೇ ಪಕ್ಷದವರಿರಲಿ, ಅವರ ರಕ್ಷಣೆಗೆ ಯಾರು ಮುಂದಾಗಬಾರದು ಎಂದು ವಿಧಾನಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ. ಯಾವುದೇ ಪಕ್ಷದವರಿರಲಿ, ರಕ್ಷಣೆಗೆ ಯಾರೂ ಮುಂದಾಗಬಾರದು. ನಮ್ಮ‌ ಪಕ್ಷದ ಯಾವ ಸಚಿವರೂ ಅವರಿಗೆ ಬೆಂಬಲ ನೀಡಿಲ್ಲ.‌ ಹಾಗೇನಾದರೂ ದಾಖಲೆಗಳಿದ್ದರೆ ಬಿಜೆಪಿ ಬಿಡುಗಡೆ ಮಾಡಲಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಲೇಬೇಕು ಎಂದರು.

ಕಾಂಗ್ರೆಸ್‌ಗೆ ಸೇರಲು ಹಲವರ ಉತ್ಸುಕ

ಬಿಜೆಪಿ ಶಾಸಕರಾದ ಶಿವರಾಮ ಹೆಬ್ಬಾರ್‌ ಮತ್ತು ಎಸ್.ಟಿ.‌ ಸೋಮಶೇಖರ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮಾಹಿತಿಯಿದೆ. ಈಗಾಗಲೇ ಅವರಿಬ್ಬರು ನಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜತೆಗೆ ಈಚೆಗೆ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಸಹ ಸ್ವಾಗತಿಸಿದ್ದಾರೆ. ಅವರು ಯಾವಾಗ ನಮ್ಮ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುತ್ತಾರೆ ಎಂದು ನೋಡಬೇಕಿದೆ. ಜತೆಗೆ ಮತ್ತೆ ಕೆಲವು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಸೂಕ್ತ ಸಮಯದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ವಿಶ್ವಾಸವಿದೆ

ರಾಜ್ಯ ಸಂಪುಟ ವಿಸ್ತರಣೆ ಮೇ ತಿಂಗಳಲ್ಲಿ ಆಗುವ ಸಾಧ್ಯತೆಯಿದೆ. ಹಿಂದೆ ಸಚಿವ ಸಂಪುಟದಲ್ಲಿಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಈ ಬಾರಿ ಸಿಗುವ ವಿಶ್ವಾಸವಿದೆ. ವಕ್ಪ್ ಅಧ್ಯಕ್ಷರ ಆಯ್ಕೆಯಲ್ಲಿ‌ ಸಚಿವ ಜಮೀರ್ ಅಹಮದ್ ಅಸಮಾಧಾನಗೊಂಡಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಪವರ್ ಶೇರಿಂಗ್ ವಿಚಾರ ಕೂಡ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.