ಗ್ರಾಮದಲ್ಲಿ ಮತ್ತೊಂದು ಕೊಳವೆಬಾವಿ ಕೊರೆಸಲಾಗಿದ್ದು, ಅದರಲ್ಲಿ ನೀರು ಲಭ್ಯವಿದೆ. ಆದರೆ, ಆ ನೀರು ಕುಡಿಯಲು ಯೋಗ್ಯವಲ್ಲ. ಬಳಕೆಗೆ ಮಾತ್ರ ಬಳಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಮುಂಗಾರು ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ತಾಲೂಕಿನ ಇಂದಿರಾನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕುಡಿಯುವ ನೀರಿಗಾಗಿ ಜನರು ನಿತ್ಯವೂ ಕಾಯುವಂತಾಗಿದ್ದು, ಗ್ರಾಮದಲ್ಲಿ ಹಾಹಾಕಾರ ಉಂಟಾಗಿದೆ.

ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೊಳವೆಬಾವಿಯ ನೀರು ಕಡಿಮೆಯಾಗಿದ್ದು ದಿನಕ್ಕೆ ನಾಲ್ಕು ಗಂಟೆ ಮಾತ್ರ ನೀರು ಲಭ್ಯವಾಗುತ್ತಿದೆ. ಈ ಅಲ್ಪಾವಧಿಯಲ್ಲಿಯೇ ಇಡೀ ಗ್ರಾಮದ ಜನರು ನೀರು ಸಂಗ್ರಹಿಸಿಕೊಳ್ಳಬೇಕಾಗಿದೆ. ಮನೆ ನಲ್ಲಿಯಲ್ಲಿ ನೀರು ಬಾರದ ಕಾರಣ ಸಾರ್ವಜನಿಕ ನಲ್ಲಿಗಳನ್ನೇ ಅವಲಂಬಿಸಬೇಕಾಗಿದೆ.

ಗ್ರಾಮದಲ್ಲಿ ಮತ್ತೊಂದು ಕೊಳವೆಬಾವಿ ಕೊರೆಸಲಾಗಿದ್ದು, ಅದರಲ್ಲಿ ನೀರು ಲಭ್ಯವಿದೆ. ಆದರೆ, ಆ ನೀರು ಕುಡಿಯಲು ಯೋಗ್ಯವಲ್ಲ. ಬಳಕೆಗೆ ಮಾತ್ರ ಬಳಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಗ್ರಾಮದ ಹೊರವಲಯದಲ್ಲಿರುವ ಕೊಳವೆಬಾವಿಗೆ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆಯಾಗುವ ಸಮಯದಲ್ಲಿಯೇ ವಿದ್ಯುತ್ ಲಭ್ಯವಾಗುತ್ತದೆ. ದಿನಕ್ಕೆ ಏಳು ಗಂಟೆ ವಿದ್ಯುತ್ ಪೂರೈಕೆಯಿದ್ದರೂ, ಅದು ಯಾವ ಸಮಯದಲ್ಲಿ ಬರುತ್ತದೆ ಎಂಬುದು ನಿಗದಿಯಿಲ್ಲ. ಹಗಲು ಅಥವಾ ರಾತ್ರಿ ವಿದ್ಯುತ್ ಬಂದಾಗ ಮಾತ್ರ ಪಂಪ್‌ಸೆಟ್ ಚಾಲನೆ ಮಾಡಿ ನೀರು ಪೂರೈಸಲಾಗುತ್ತದೆ. ಇದರಿಂದ ನೀರಿನ ಪೂರೈಕೆಯೂ ಅನಿಯಮಿತವಾಗಿದೆ.

ನೀರು ಬರುತ್ತದೆ ಎಂದು ಸಾರ್ವಜನಿಕ ನಲ್ಲಿಗಳ ಬಳಿ ಕಾಯುವ ಗ್ರಾಮಸ್ಥರಿಗೆ ನಿರಾಸೆಯೇ ಹೆಚ್ಚಾಗಿದೆ. ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಪೂರೈಕೆ ಸ್ಥಗಿತಗೊಳ್ಳುತ್ತದೆ. ಗಂಟೆಗಟ್ಟಲೆ ಕಾಯುವ ಜನರು ನೀರು ಸಿಗದೆ ಮರಳಿ ಮನೆಗೆ ತೆರಳಬೇಕಾಗುತ್ತದೆ. ಮತ್ತೆ ಮರುದಿನ ಬಂದು ಕಾಯುವುದು ಅನಿವಾರ್ಯವಾಗಿದೆ. ಇದು ಒಂದು ದಿನದ ಸಮಸ್ಯೆಯಲ್ಲ; ನಿತ್ಯವೂ ಇದೇ ಗೋಳು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಮಳೆಗಾಲದಲ್ಲಿಯೇ ಕುಡಿಯುವ ನೀರಿಗಾಗಿ ಇಷ್ಟೊಂದು ತೊಂದರೆ ಅನುಭವಿಸುವಂತಾದರೆ, ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಿತ್ಯ ಸರ್ಕಸ್: ಈಗಲೇ ಕುಡಿಯುವ ನೀರಿಗೆ ತಾತ್ವಾರ ಶುರುವಾಗಿದ್ದು ಬೇಸಿಗೆಯಲ್ಲಿ ನಮ್ಮ ಪರಿಸ್ಥಿತಿ ಏನಾಗಬಹುದು? ಕುಡಿಯುವ ನೀರಿಗಾಗಿ ನಿತ್ಯವೂ ಸರ್ಕಸ್ ಮಾಡಬೇಕಾಗಿದೆ ಎಂದು ಗ್ರಾಮಸ್ಥರಾದ ಸವಿತಾ ತಿಳಿಸಿದರು.

ಕುಡಿಯಲು ಯೋಗ್ಯವಲ್ಲ: ಕೊಳವೆಬಾವಿಯಲ್ಲಿ ನೀರು ಕಡಿಮೆ ಆಗಿರುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಬೇರೆಡೆ ಕೊಳವೆಬಾವಿ ಕೊರೆಸಲಾಗಿದ್ದು, ಅದರ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಬಳಕೆಗೆ ಮಾತ್ರ ಉಪಯೋಗಿಸುವಂತೆ ತಿಳಿಸಲಾಗಿದೆ ಎಂದು ಇಂದರಗಿ ಗ್ರಾಮ ಪಂಚಾಯಿತಿ ಪಿಡಿಒ ಉದಯ ತಿಳಿಸಿದರು.