ಸಾರಾಂಶ
ಖಾನಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಎಸ್‌ಎಸ್‌ಎಸ್ ಮತ್ತು ಸ್ಕೌಟ್ಸ್, ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಖಾನಾಪುರ
ಇಂದಿನ ಬದಲಾದ ಕಾಲಘಟ್ಟದಲ್ಲಿ ಎಲ್ಲರೂ ಹೊಸ ಶಿಕ್ಷಣ ನೀತಿಗೆ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಎಸ್‌ಎಸ್‌ಎಸ್ ಮತ್ತು ಸ್ಕೌಟ್ಸ್, ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಇಂದು ವಿಪುಲವಾದ ಅವಕಾಶಗಳಿವೆ. ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು. ಯಾವುದೇ ಚಟ ಅಥವಾ ಮೋಹಗಳಿಗೆ ಬಲಿಯಾಗದೇ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ಶಿಕ್ಷಣದ ಕೋರ್ಸುಗಳ ಪ್ರಾರಂಭಕ್ಕೆ ಪ್ರಯತ್ನಿಸಲಾಗುವುದು. ಕಾಲೇಜಿನಲ್ಲಿರುವ ಸಿಬ್ಬಂದಿ ಕೊರತೆ ಮತ್ತು ಮೂಲಸೌಕರ್ಯಗಳ ಕೊರತೆಯ ಬಗ್ಗೆಯೂ ಗಮನಹರಿಸಲಾಗುವುದು ಎಂದು ತಿಳಿಸಿದರು.ಸದಲಗಾ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಆರ್ ಪಾಟೀಲ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ದಿಲೀಪ ಜವಳಕರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಠ್ಠಲ ಹೊಸೂರ, ಅಪ್ಪಯ್ಯ ಕೋಡೊಳಿ, ಎಸ್.ಆರ್ ಮೊರಬ, ಎ.ಬಿ.ಮುರಗೋಡ, ಜಾರ್ಡನ್ ಗೋನ್ಸಾಲ್ವಿಸ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ.ವಿದ್ಯಾ ಜೀರಗೆ ಸ್ವಾಗತಿಸಿದರು. ಗೀತಾ ಶಿವಪೂಜಿ ನಿರೂಪಿಸಿದರು. ಅಂಬರೀಷ ರೇವತಗಾಂವ ಅತಿಥಿಗಳನ್ನು ಪರಿಚಯಿಸಿದರು. ಎಫ್.ಬಿ.ನಾಯ್ಕರ ಪ್ರಾಸ್ತಾವಿಕ ಮಾತನಾಡಿದರು. ಎಸ್.ಕೆ.ಮೂಲಿಮನಿ ವಂದಿಸಿದರು.