ಸಾರಾಂಶ
ಮಡಿವಾಳ ಸಮಾಜದ ಬೇಡಿಕೆ ಒಂದೆ ಪರಿಶಿಷ್ಟ ಜಾತಿಗೆ ಸೇರಿಸಬೇಕು. ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕು ಎಂದು ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಕಾಯಕ ಶ್ರೇಷ್ಠರಾದ ಮಡಿವಾಳ ಮಾಚಿದೇವರ ವಿಶ್ವಾತೀತವಾದ ಸಂದೇಶಗಳನ್ನು ಸಾರುವ ಸಲುವಾಗಿ, ಕಳೆದ ಹತ್ತು ವರ್ಷಗಳಿಂದ ಮಡಿವಾಳ ಮಾಚಿದೇವ ಜಯಂತೋತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಈ ಸಮಾಜದ ಬೇಡಿಕೆ ಒಂದೆ ಪರಿಶಿಷ್ಟ ಜಾತಿಗೆ ಸೇರಿಸಬೇಕು. ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕು ಎಂದು ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.ಶಿರಾ ತಾಲೂಕು ಮಡಿವಾಳ ಮಾಚಿದೇವ ಸಂಘ ಹಾಗೂ ಶ್ರೀ ವೀರಘಂಟೆ ಮಡಿವಾಳ ಮಾಚಿದೇವರ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತೋತ್ಸವ ಹಾಗೂ ವೀರಘಂಟೆ ಮಡಿವಾಳ ಮಾಚಿದೇವರ ಹತ್ತನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಡಿವಾಳ ಸಮುದಾಯವು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಸಮುದಾಯವು ಶೈಕ್ಷಣಿಕವಾಗಿ ಪ್ರಗತಿಯಾಗಲು, ರಾಜಕೀಯವಾಗಿ ಪ್ರಾತಿನಿಧ್ಯಕ್ಕೆ ಮೀಸಲಾತಿ ಬೇಕೇ ಬೇಕು. ಆದ್ದರಿಂದ ಸರ್ಕಾರವು ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಮೀಸಲು ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಹತ್ತು ವರ್ಷಗಳ ಹಿಂದೆಯೇ ಡಾ. ಅನ್ನಪೂರ್ಣಮ್ಮ ಅವರು ಅಧ್ಯಯನ ಮಾಡಿ ಕುಲಶಾಸ್ತ್ರದ ಅಧ್ಯಯದ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದರು.ಮಾಜಿ ಜಿ.ಪಂ. ಸದಸ್ಯ ಮುದಿಮಡು ರಂಗಶಾಮಯ್ಯ ಮಾತನಾಡಿ, ಮಡಿವಾಳ ಸಮುದಾಯದ ಹಲವು ವರ್ಷಗಳ ಬೇಡಿಕೆಯಾದ ಎಸ್ಸಿ ಪಟ್ಟಿಗೆ ಸೇರಿಸುವ ಬೇಡಿಕೆಯನ್ನು ಯಾವುದೇ ಪಕ್ಷಗಳು ಈಡೇರಿಸಿಲ್ಲ. ನಮ್ಮ ಸಮಾಜವನ್ನು ಅತ್ಯಂತ ಕೀಳುಮಟ್ಟದಲ್ಲಿ ಕಾಣುತ್ತಿದೆ. ಸಿದ್ದರಾಮಯ್ಯ ಅವರು ಜಯಂತಿಯನ್ನು ಆಚರಿಸಲು ಅವಕಾಶ ಮಾಡಿದರು. ಎಚ್.ಡಿ. ಕುಮಾರಸ್ವಾಮಿ ಅವರು ನಿಗಮ ರಚಿಸಿದರು. ನಿಗಮದಿಂದ ಯಾವುದೇ ಲಾಭ ಆಗುತ್ತಿಲ್ಲ. ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಎಂದರು.
ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ಮಡಿವಾಳ ಸಮುದಾಯದವರು ೧೦ ವರ್ಷಗಳಿಂದ ಮಾಡಿವಾಳ ಮಾಚಿದೇವರ ಜಯಂತೋತ್ಸವ ಆಚರಿಸುತ್ತಿದ್ದಾರೆ. ಸಣ್ಣಪುಟ್ಟ ಜಾತಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ರಾಜ್ಯದಲ್ಲಿ ಅನೇಕ ಬೇಡಿಕೆಗಳನ್ನು ಇವೆ. ಸರ್ಕಾರದ ಸವಲತ್ತುಗಳು ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಮಡಿವಾಳ ಸಂಘ ಶಕ್ತಿಯಾಗಿ ಬೆಳೆಯಬೇಕು ಎಂದರು.ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ವೀರಘಂಟೆ ಮಡಿವಾಳ ಮಾಚಿದೇವರ ಭಾವಚಿತ್ರವನ್ನು ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿರಾ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಬಿ.ಕೆ. ಈಶ್ವರ್, ವೀರಘಂಟೆ ಮಡಿವಾಳ ಮಾಚಿದೇವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಸ್.ಎನ್. ಮಹೇಶ್‌ಕುಮಾರ್, ಗೌರವಾಧ್ಯಕ್ಷ ಮದಿಮಡು ರಂಗಶ್ಯಾಮಯ್ಯ, ಉಪಾಧ್ಯಕ್ಷ ಜಯಣ್ಣ, ನಟರಾಜು ಡಿ., ಎಚ್.ಬಿ. ಜ್ಞಾನೇಶ್, ಭೂತೇಶ್, ಎಸ್.ಕೆ. ಕುಮಾರ್, ನಗರಸಭೆ ಸದಸ್ಯ ಆರ್. ರಾಮು, ಎಸ್.ಎಲ್. ರಂಗನಾಥ್, ಉಮಾ ವಿಜಯರಾಜ್, ಮಾಜಿ ಸದಸ್ಯ ಆರ್. ರಾಘವೇಂದ್ರ, ಎಸ್.ಜೆ. ರಾಜಣ್ಣ, ಶಿರಾ ಕಾಂಗ್ರೆಸ್ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ, ಶೇಖ್ ಮಹಮದ್ ಅಲಿ ಸೇರಿದಂತೆ ಹಲವರು ಹಾಜರಿದ್ದರು.