ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಬೆಂಗಳೂರಿನ ನಂತರ ತುಮಕೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಗ್ರೇಟರ್ ಬೆಂಗಳೂರು ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ನಗರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ರಾಷ್ಟ್ರೀಯ ವರ್ತಕರ ಕಲ್ಯಾಣ ಮಂಡಳಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವರ್ತಕರ ಸಮಾವೇಶದಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವರ್ತಕರ ಎಲ್ಲ ಬೇಡಿಕೆಗಳ ಕುರಿತು ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ವರ್ತಕರ ಕಲ್ಯಾಣ ಮಂಡಳಿ ಅಧ್ಯಕ್ಷ ಸುನಿಲ್ ಸಿಂಘಿ ಮಾತನಾಡಿ, ವ್ಯಾಪಾರಸ್ಥ ಕಾರ್ಮಿಕರಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆ, 60 ವರ್ಷ ದಾಟಿದ ವ್ಯಾಪಾರಸ್ಥರಿಗೆ ೩ ಸಾವಿರ ಪಿಂಚಣಿ ನೀಡಲಾಗುವುದು ಎಂದು ತಿಳಿಸಿದರು. ಟಿಡಿಸಿಸಿಐ ಸಂಸ್ಥೆ ಸಲ್ಲಿಸಿರುವ ಮನವಿ ಪತ್ರದಲ್ಲಿರುವ ವ್ಯಾಪಾರಸ್ಥರ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಟಿ.ಜೆ.ಗಿರೀಶ್ ಮಾತನಾಡಿ, ವರ್ತಕರಿಗೆ ಹಾಗೂ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸೂಕ್ತ ಜಾಗದಲ್ಲಿ, ಕೋಲ್ಡ್ ಸ್ಟೋರೇಜ್ ಹಾಗೂ ಉಗ್ರಾಣಗಳನ್ನು ಸ್ಥಾಪನೆ ಮಾಡುವುದು, ತೆಂಗು, ಹುಣಸೆ, ಮಾವು, ಕಡಲೆಕಾಯಿ ಹಾಗೂ ಹಲಸು ಉತ್ಪನ್ನಗಳ ಅಭಿವೃದ್ಧಿ ಘಟಕಗಳನ್ನು ಜಿಲ್ಲೆಯ ಸೂಕ್ತ ಸ್ಥಳಗಳಲ್ಲಿ ಸ್ಥಾಪನೆ ಮಾಡಬೇಕು. ಜಿಲ್ಲೆ ಮಂಜೂರಾಗಿರುವ ಇಎಸ್‌ಐ ಆಸ್ಪತ್ರೆ ಜಾಗವನ್ನು ನಿಗದಿಗೊಳಿಸಿ ಆದಷ್ಟು ಶೀಘ್ರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಟ್ರೇಡ್ ಆ್ಯಂಡ್ ಇಂಡಸ್ಟ್ರಿಗಳಿಗೆ ಹಾಲಿ ಇರುವ ವೃತ್ತಿ ತೆರಿಗೆಯನ್ನು ರದ್ದುಪಡಿಸಬೇಕು. ಮಾರುಕಟ್ಟೆ ವ್ಯಾಪಾರ ಕೇಂದ್ರ ಸ್ಥಳಗಳಲ್ಲಿ ಬಹುಜನರಿಗೆ ಅನುಕೂಲವಾಗುವಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ರಾಜ್ಯದಲ್ಲಿ ಮತ್ತು ದೇಶದಲ್ಲಿ ವರ್ತಕ ಸಮುದಾಯವನ್ನು ಪ್ರೋತ್ಸಾಹಿಸಲು ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಟಿಡಿಸಿಸಿಐ ಪದಾಧಿಕಾರಿಗಳು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಇದೇ ಸಂದರ್ಭದಲ್ಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯ ಪ್ರಕಾಶ್ ಫಿರ್ಗಲ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮತ್ತಿತರರು ಉಪಸ್ಥಿತರಿದ್ದರು.