ದೀಪಾವಳಿ ಹಬ್ಬಕ್ಕಾಗಿ ಪ್ರಯಾಣಿಕರ ದಟ್ಟಣೆ : ಹೆಚ್ಚುವರಿ 55 ರೈಲು ಸಂಚಾರ, ನೆರವು ಕೇಂದ್ರ ಆರಂಭ

| Published : Oct 29 2024, 01:49 AM IST / Updated: Oct 29 2024, 01:13 PM IST

ಸಾರಾಂಶ

ದೀಪಾವಳಿ ಹಬ್ಬಕ್ಕಾಗಿ ಹೆಚ್ಚಿದ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ನೈಋತ್ಯ ರೈಲ್ವೆ ವಲಯದಲ್ಲಿ 55 ರೈಲುಗಳನ್ನು ಸಂಚಾರ ಮಾಡುತ್ತಿದ್ದು, ಸಾಮಾನ್ಯ ರೈಲುಗಳಿಗೆ ವೇಟಿಂಗ್‌ ಲೀಸ್ಟ್‌ ಆಧಾರದಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಲಿದೆ.

 ಬೆಂಗಳೂರು : ದೀಪಾವಳಿ ಹಬ್ಬಕ್ಕಾಗಿ ಹೆಚ್ಚಿದ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ನೈಋತ್ಯ ರೈಲ್ವೆ ವಲಯದಲ್ಲಿ 55 ರೈಲುಗಳನ್ನು ಸಂಚಾರ ಮಾಡುತ್ತಿದ್ದು, ಸಾಮಾನ್ಯ ರೈಲುಗಳಿಗೆ ವೇಟಿಂಗ್‌ ಲೀಸ್ಟ್‌ ಆಧಾರದಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಲಿದೆ.

ಹಬ್ಬದ ವೇಳೆ ದಟ್ಟಣೆ ನಿಯಂತ್ರಿಸಲು ನಗರದ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳಲ್ಲಿ ಭದ್ರತಾ ಅಧಿಕಾರಿಗಳು, ವಾಣಿಜ್ಯ ಸಿಬ್ಬಂದಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಜೊತೆಗೆ ಸುವ್ಯವಸ್ಥೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ, ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಮತ್ತು ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಟಿಕೆಟಿಂಗ್ ಕೌಂಟರ್ ಒದಗಿಸಲಾಗಿದೆ. ಈಗಾಗಲೇ ಮೆಜೆಸ್ಟಿಕ್‌ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಟಿಕೆಟಿಂಗ್, ನಿರ್ದೇಶನಗಳು ಮತ್ತು ವೇಳಾಪಟ್ಟಿ ಮಾಹಿತಿಯೊಂದಿಗೆ ತಾತ್ಕಾಲಿಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿರಂತರ ಎಟಿವಿಎಂ ಟಿಕೆಟಿಂಗ್ (ಟಿಕೇಟ್‌ ಮಷಿನ್‌) ಅನುಕೂಲಕ್ಕಾಗಿ ಎಲ್ಲ ಎಟಿವಿಎಂ ಆಯೋಜಕರಿಗೆ ಹೆಚ್ಚುವರಿ ಸ್ಮಾರ್ಟ್ ಕಾರ್ಡ್ ಮುಂಚಿತವಾಗಿ ನೀಡಲಾಗಿದೆ.

ಪ್ರಯಾಣಿಕರು ಟಿಕೆಟ್ ಪಡೆಯುವುದನ್ನು ಮತ್ತು ಕ್ರಮಬದ್ಧವಾಗಿಸಲು ಬುಕಿಂಗ್ ಕೌಂಟರ್‌ಗಳಲ್ಲಿ ಮತ್ತು ಸಾಮಾನ್ಯ ಕೋಚ್ ಪ್ರವೇಶದ್ವಾರಗಳಲ್ಲಿ ಸರದಿ ಸಾಲು ವ್ಯವಸ್ಥಾಪನೆಗೆ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.