ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಪಘಾತಗಳಲ್ಲಿ ಮೃತರಾದ ಸಾರಿಗೆ ಸಂಸ್ಥೆಯ ಬಸ್ ಚಾಲಕರ, ಕಂಡಕ್ಟರಗಳ ವಾರಸುದಾರರಿಗೆ ಸದ್ಯ ₹50 ಲಕ್ಷ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಇದನ್ನು ₹1 ಕೋಟಿಗೆ ಹೆಚ್ಚಿಸುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಗಾರೆಡ್ಡಿ ತಿಳಿಸಿದರು.ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸುಗಳ ಲೋಕಾರ್ಪಣೆ, ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಹಾಗೂ ಹಾರೂಗೇರಿ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳ ಕೊರತೆ ಇಲ್ಲ. ಸಾರಿಗೆ ಇಲಾಖೆಯನ್ನು ಇನ್ನಷ್ಟು ಬಲಪಡಿಸಿ, ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಗಮನಹರಿಸಲಿದೆ. ಮುಂದಿನ 3 ತಿಂಗಳಲ್ಲಿ ಹೆಚ್ಚುವರಿ ಬಸ್ ಸಂಚಾರ ಕಾರ್ಯಾಚರಣೆ ಕೈಗೊಂಡು ಸಂಚಾರ ವ್ಯವಸ್ಥೆ ಸುಧಾರಣೆಗೆ ತರಲಾಗುವುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮ ಸರ್ಕಾರದ ವರ್ಕೋಹಾಲಿಕ್ ಮಂತ್ರಿ. ಸಾರಿಗೆ ಇಲಾಖೆಗೆ ಅವರು ಬಂದಿದ್ದು ಹೆಮ್ಮೆ. ಬೆಳಗಾವಿಗೆ 2ನೇ ರಾಜಧಾನಿ ಎಂದು ಕರೆಯುತ್ತಾರೆ. ನಮ್ಮ ಜಿಲ್ಲೆ 50 ಬಸ್ ಹಂಚಿಕೆ ಮಾಡಲಾಗಿದೆ, ಇನ್ನೂ 1 ಸಾವಿರ ಬಸ್ ಖರೀದಿ, 2 ಸಾವಿರ ಉದ್ಯೋಗ ಭರ್ತಿಗೆ ಕ್ರಮ ವಹಿಸಲಾಗಿದೆ. ಕರ್ನಾಟಕ ಸಾರಿಗೆ ಸಂಸ್ಥೆಯ ಬಗ್ಗೆ ಹೆಮ್ಮೆಯಿದೆ. 25 ವರ್ಷಗಳ ಹಿಂದೆ ನಮ್ಮ ಊರಿಗೆ ವಸ್ತಿ ಬಸ್ ಬರುತ್ತಿತ್ತು. ಚಾಲಕ ನಿರ್ವಾಹಕರಿಗೆ ನಮ್ಮ ಮನೆಯಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಅದನ್ನು ಸಹ ನೋಡಿದ್ದೇನೆ, ಈಗಿನ ವ್ಯವಸ್ಥೆ ಸಹ ನಾನು ನೋಡಿದ್ದೇನೆ. 145 ಜನರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಟ್ಟಿದ್ದೇವೆ, ಧರ್ಮಸ್ಥಳ, ಕೊಲ್ಲೂರು ಸೇರಿ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರು ಓಡಾಡಿ ಗೃಹಲಕ್ಷ್ಮಿ ಯೋಜನೆ ಹಣವನ್ನು ದೇವಿಗೆ ಉಡಿ ತುಂಬಿ ಖುಷಿ ಪಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಜಾರಿಗೆ ತಂದು ಇಂಥ ಪುಣ್ಯದ ಕೆಲಸ ಮಾಡಿದ್ದಾರೆ ಎಂದರು.ಮಳೆ, ಚಳಿ, ಬಿಸಿಲು ಏನೇ ಇದ್ದರೂ ಸಾರ್ವಜನಿಕರ ಸೇವೆಗೆ ಸಾರಿಗೆ ಇಲಾಖೆಯ ನೌಕರರು ಸದಾ ಶ್ರಮಿಸುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಸೇವಾ ಮನೋಭಾವದ ಹಿಂದೆ ನಿಮ್ಮ ಕುಟುಂಬದ ತ್ಯಾಗ ಬಹಳಷ್ಟಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳು ಬಡವರಪರ ಯೋಜನೆಗಳಾಗಿವೆ. ರಾಜ್ಯದ ಬಹುಸಂಖ್ಯಾತ ಜನಸಮುದಾಯವನ್ನು ತಲುಪುವ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಮಾತನಾಡಿ, ಪ್ರತಿದಿನ ಸರಾಸರಿ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲಿ ಶೇ.61 ರಷ್ಟು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಬಸ್ ಗಳ ಸಂಚಾರದ ಕೊರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ. ಅದೇ ರೀತಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಹ ಕಲ್ಪಿಸಲಾಗುವುದು ಎಂದರು.ಶಾಸಕ ಆಸೀಫ್ (ರಾಜು) ಸೇಠ್ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜನರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯದ ಜನರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಭರತ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಬೆಳ್ಳಿ ಪದಕ ವಿತರಣೆ:
ಇದಕ್ಕೂ ಮುಂಚೆ ನೂತನ 50 ಬಸ್ ಗಳನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಲಾಯಿತು. ಸಚಿವ ರಾಮಲಿಂಗರೆಡ್ಡಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಅಪಘಾತ ರಹಿತ 5 ವರ್ಷಗಳ ವಾಹನ ಚಾಲನೆ ಮಾಡಿದ 38 ಬಸ್ ಚಾಲಕರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ನೀಡಿ, ಸನ್ಮಾನಿದರು.ಈ ವೇಳೆ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕ ಬಾಬಾಸಾಹೇಬ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಸಾರಿಗೆ ಸಂಸ್ಥೆಯ ಬೆಳಗಾವಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಥೋಡ ಇದ್ದರು. ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ, ಸಿಬ್ಬಂದಿ, ಕುಟುಂಬ ವರ್ಗದವರು ಮತ್ತಿತರು ಹಾಜರಿದ್ದರು.
ಕೋಟ್ನಾನು ಕೂಡ ರಾಮನ ಭಕ್ತಳು, ರಾಮರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಸರ್ಕಾರ ನಡೆಯುತ್ತಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಇದನ್ನು ಪಾಲಿಸುತ್ತಿದೆ. ನಾವು ಈಗಾಗಲೇ ರಸ್ತೆ, ಬ್ರಿಡ್ಜ್, ಶಾಲೆ ಸಾಕಷ್ಟು ನಿರ್ಮಿಸಿದ್ದೇವೆ, ಗ್ಯಾರಂಟಿ ಮೂಲಕ ಮನೆ ಮನೆಗಳಲ್ಲಿ ರಾಮರಾಜ್ಯ ನಿರ್ಮಿಸುತ್ತಿದ್ದೇವೆ. ಬೆಳಗಾವಿಯಲ್ಲಿ ತಾಯಿಯೊಬ್ಬಳು ತನ್ನ ಮಗನ ಅಂತ್ಯ ಸಂಸ್ಕಾರ ಮಾಡಲು ಪರದಾಡಿದ ವಿಡಿಯೋ ನೋಡಿದೆ. ಅಂತಹ ದುಖಃ ಸಂದರ್ಭದಲ್ಲಿ ಸರ್ಕಾರದಿಂದ ಸಿಗುತ್ತಿರುವ 2 ಸಾವಿರ ಹಣದ ಬಗ್ಗೆ ನೆನಪು ಮಾಡಿಕೊಂಡಿದ್ದಾಳೆ. ಬಡ ಕುಟುಂಬದ ನೆರವಿಗೆ ನಾವು ನಿಲ್ಲಬೇಕು, ಮನೆ ಮನೆಗಳಲ್ಲಿ ರಾಮ ರಾಜ್ಯ ನಿರ್ಮಾಣದ ಉದ್ದೇಶ ನಮ್ಮದು.
ಲಕ್ಷ್ಮೀ ಹೆಬ್ಬಾಳಕರ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ--ಮಾರ್ಗ ಮಧ್ಯೆ ಬಸ್ ನಿಂತೋದ್ರೆ ಗ್ರಾಮೀಣ ಭಾಗದ ಜನ ಹಿಡಿಶಾಪ ಹಾಕ್ತಾರೆ ಸರ್.. ಬಸ್ ಕೆಟ್ಟು ನಿಂತೋದ್ರೆ ಮನೆ ಮಠ ಹಾಳಾಗ್ ಹೋಗ್ಲಿ ಅಂತ ಜನ ಬೈತಾರೆ. ಈ ಕಾರಣಕ್ಕೆ ಗ್ರಾಮೀಣ ಭಾಗಕ್ಕೂ ಹೊಸ ಬಸ್ ವ್ಯವಸ್ಥೆ ಕಲ್ಪಿಸಿ. ನೂತನ ಬಸ್‌ಗಳ ಸೇವೆ ನಗರ ಪ್ರದೇಶಗಳಿಗೆ ಮಾತ್ರ ಕೊಡ್ತಿರಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಗ್ರಾಮೀಣ ಭಾಗಕ್ಕೂ ಹೊಸ ಬಸ್ ಬಿಡಿ ಎಂದು ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಳಿ ಮನವಿ ಮಾಡಿದರು.