ಹೊಸಕೋಟೆ: ಹೊಸಕೋಟೆ ನಗರದ ಸಮಗ್ರ ಅಭಿವೃದ್ಧಿಗಾಗಿ 93.06 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ 50 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು

ಹೊಸಕೋಟೆ: ಹೊಸಕೋಟೆ ನಗರದ ಸಮಗ್ರ ಅಭಿವೃದ್ಧಿಗಾಗಿ 93.06 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ 50 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ನಗರದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತಗಳಿಗಾಗಿ ಅಭಿವೃದ್ಧಿ ಮಾಡುವುದಕ್ಕಿಂತ ಸಾರ್ವಜನಿಕರಿಗೆ ದೀರ್ಘಕಾಲ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. 16 ಕೋಟಿಯಲ್ಲಿ ಪ್ರಜಾಸೌಧ ಸೇರಿದಂತೆ 93.06 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಮುಂದಿನ ೯ ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ 2.5 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ರಾಷ್ಟ್ರೀಯ ಹೆದ್ದಾರಿ-85ರ ಡಿಎಲ್‌ಟಿ ಯೋಜನೆಯಡಿ 3.15 ಕೋಟಿ ವೆಚ್ಚದಲ್ಲಿ ಉಪ್ಪಾರಹಳ್ಳಿ ಭಾಗದಲ್ಲಿ ರಸ್ತೆ ಅಭಿವೃದ್ಧಿ, ನಗರದ ಮನೆಗಳಿಗೆ ಭೂಗತ ವಿದ್ಯುತ್ ಕೇಬಲ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 125 ಕೋಟಿ ವೆಚ್ಚದ ಯುಜಿ ಕೇಬಲ್ ಕಾಮಗಾರಿ, ಹಳೆ ಹೊಸಕೋಟೆಯಲ್ಲಿ ಒಂದು ಸಾವಿರ ವಿದ್ಯುತ್ ಕಂಬಗಳ ಆಳವಡಿಕೆ, ಕೆ.ಆರ್.ರಸ್ತೆ ಉನ್ನತೀಕರಣಕ್ಕೆ ೧.೫ ಕೋಟಿ, ಕೆಇಬಿ ಸರ್ಕಲ್‌ನಿಂದ ಕಾಲೇಜುವರೆಗಿನ ರಸ್ತೆ, ಚರಂಡಿ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 3.5 ಕೋಟಿ ಹಾಗೂ ಗಣಗಲು ರಸ್ತೆ ಅಭಿವೃದ್ಧಿಗೆ 3.5 ಕೋಟಿ ವೆಚ್ಚ ಮಾಡಲಾಗುವುದು ಎಂದು ಹೇಳಿದರು.

ದೊಡ್ಡಕೆರೆ ಹಾಗೂ ದೊಡ್ಡಹುಲ್ಲೂರು ಕೆರೆಯನ್ನು ನೀರು ಸಂಗ್ರಹಣೆಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಹೊಸಕೋಟೆ ಚಿಂತಾಮಣಿ ರಸ್ತೆಯನ್ನು 1100 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಪುರಂನಿಂದ ಎಂವಿಜೆ ವರೆಗೆ 6 ಪಥದ ಮೇಲ್ಸೇತುವೆ ವಿಸ್ತರಿಸುವ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ. ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ನಗರಸಭೆ ಪೌರಾಯಕ್ತ ನೀ ಲೋಚನ ಪ್ರಭು ಮಾತನಾಡಿ, ನಗರದ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ ವರ್ಷ 45 ಕೋಟಿ ಬಜೆಟ್ ಮಂಡಿಸಲಾಗಿದ್ದು, ಈ ಬಾರಿ 53 ಕೋಟಿ ಬಜೆಟ್ ರೂಪಿಸಲಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಶೀತಲ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಬಿಎಂಆರ್‌ಡಿ ಅಧ್ಯಕ್ಷ ಕೇಶವಮೂರ್ತಿ, ನಿರ್ದೇಶಕ ಡಾ.ಎಚ್.ಎಂ ಸುಬ್ಬರಾಜು, ಕೊರಳೂರು ಸುರೇಶ್, ಸಿ.ಜಯರಾಜ್, ವಿಜಯ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘ ನಿರ್ದೇಶಕ ರಾಜಶೇಖರ್‌ಗೌಡ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ವೀರಶೈವ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ರಾಜ್ ಕುಮಾರ್, ಯುವ ಮುಖಂಡ ಬಿ.ಜಿ ನಾರಾಯಣಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಇತರರು ಹಾಜರಿದ್ದರು.

ಫೋಟೋ: 6 ಹೆಚ್‌ಎಸ್‌ಕೆ 1 ಮತ್ತು 2

1: ಹೊಸಕೋಟೆ ತಾಲೂಕು ಕಚೇರಿ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

2: ಹೊಸಕೋಟೆ ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಶಿಲಾನ್ಯಾಸ ನೆರವೇರಿಸಿದರು.