ಜಿಲ್ಲೆಯ ಗೃಹ ಬಳಕೆ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಲಿಂಡರ್ ವಿತರಣಾ ಸಂಸ್ಥೆಯವರಿಗೆ ಉಡುಪಿ - ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ: ಜಿಲ್ಲೆಯ ಗೃಹ ಬಳಕೆ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಲಿಂಡರ್ ವಿತರಣಾ ಸಂಸ್ಥೆಯವರಿಗೆ

ಉಡುಪಿ - ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೃಹ ಬಳಕೆ ಸೇರಿದಂತೆ

ಮತ್ತಿತರ ಅನಿಲ ವಿತರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಶ್ಚಿಮ ಏಷ್ಯಾ ಯುದ್ಧ ಬಿಕ್ಕಟ್ಟಿನಿಂದ ಸಮರ್ಪಕವಾಗಿ ಅನಿಲ ಆಮದು ಆಗದೆ ಸ್ವಲ್ಪ ತೊಂದರೆ ಉಂಟಾಗಿದೆ. ಆದರೆ ಗೃಹ ಬಳಕೆ ಅನಿಲಗಳ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವಿತರಿಸಲು ಕೇಂದ್ರ ಸರ್ಕಾರ ಬದ್ಧವಿದೆ. ಆದ್ದರಿಂದ ಗೃಹ ಬಳಕೆ ವಿತರಣೆಯಲ್ಲಿ ಏಕ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಹಾಗೂ ವಿತರಣಾ ಸಂಸ್ಥೆಯವರಿಗೆ ಸೂಚಿಸಿದರು.

ವಾಣಿಜ್ಯ ಬಳಕೆಯ ಗ್ರಾಹಕರಿಗೆ ಶೇ. 20 ಪ್ರಮಾಣ ಅನಿಲ ಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ವಿದ್ಯಾರ್ಥಿ ನಿಲಯಗಳಿಗೆ, ಆಸ್ಪತ್ರೆ, ಶಾಲೆ ಸೇರಿದಂತೆ ಮತ್ತಿತರ ಅತೀ ಅಗತ್ಯವಿರುವ ಸಂಸ್ಥೆಗಳಿಗೆ ಆದ್ಯತೆಯ ಮೇಲೆ ವಾಣಿಜ್ಯ ಸಿಲಿಂಡರ್ ಗಳ ವಿತರಣೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ಆದರೆ ಅನಧಿಕೃತವಾಗಿ ದಾಸ್ತಾನು ಮಾಡದಂತೆ ಎಚ್ಚರ ವಹಿಸಬೇಕು. ಜನರೇಟರ್ ಗಳಿಗೆ ಹಾಗೂ ಮೀನುಗಾರಿಕಾ ಬೋಟ್ ಗಳಿಗೆ, ನಿರಂತರವಾಗಿ ಕೊಂಡೋಯುವವರಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಮಾತನಾಡಿ, ವಾಹನಕ್ಕೆ ಬಳಕೆ ಮಾಡುವ ಎಲ್‌ಪಿಜಿ ಹಾಗೂ ಸಿಎನ್‌ಜಿ ಅನಿಲಗಳನ್ನು ಆಯಿಲ್ ಕಾರ್ಪೋರೇಶನ್ ಸಂಸ್ಥೆಗಳು ನಿಗದಿಪಡಿಸಿರುವ ದರದಲ್ಲಿಯೇ ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅಂಥವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎ.ಎಸ್.ಪಿ ಸುಧಾಕರ್ ನಾಯಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಗ್ಯಾಸ್ಏಜನ್ಸಿ ಹಾಗೂ ಬಂಕುಗಳ ಮಾಲೀಕರು, ವಿತರಕರು ಇದ್ದರು.