ಸಾರಾಂಶ
ಹಾವೇರಿ: ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಮಕ್ಕಳ ರಕ್ಷಣಾ ನೀತಿ-೨೦೧೬ರನ್ನು ತಿಳಿದುಕೊಳ್ಳಬೇಕು ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಮಕ್ಕಳ ರಕ್ಷಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಜವಾಬ್ದಾರಿ ಮಾತ್ರವಲ್ಲ, ಭಾಗೀದಾರರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು ಎಂದರು.ಜಿಲ್ಲೆಯ ಹಿರೇಕೆರೂರು ಹಾಗೂ ಬ್ಯಾಡಗಿ ತಾಲೂಕಿನ ವಸತಿಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಕಳವಳಕಾರಿ ಸಂಗತಿಯಾಗಿದೆ. ಇಂತಹ ಪ್ರಕರಣಗಳು ನಡೆಯದಂತೆ ಜಾಗೃತೆ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ತನಿಖೆ ನಡೆಯುತ್ತಿದ್ದು, ತನಿಖೆ ಆನಂತರ ಸತ್ಯಾಂಶ ಹೊರಬರಲಿದೆ. ಬ್ಯಾಡಗಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪಾಲಕರಿಗೆ ಸಾಂತ್ವನ ಹೇಳಲಾಗಿದೆ. ಐದು ಲಕ್ಷ ರು. ಪರಿಹಾರ ಮೊತ್ತವನ್ನು ಪಾಲಕರ ಬ್ಯಾಂತೆಗೆ ಜಮೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬ್ಯಾಡಗಿ ವಸತಿ ಶಾಲೆಯ ವಿದ್ಯಾರ್ಥಿಗೆ ಆರೋಗ್ಯ ಸಮಸ್ಯೆ ಎಂದು ಹೇಳಲಾಗುತ್ತದೆ, ಆದರೆ ದುರ್ದೈವದ ಸಂಗತಿ ಎಂದರೆ ಆ ಶಾಲೆಯ ಪ್ರಾಚಾರ್ಯರು, ವಾರ್ಡ್ ಹಾಗೂ ಸ್ಟಾಫ್ ನರ್ಸ್ ಆ ವಿದ್ಯಾರ್ಥಿಯೊಂದಿಗೆ ಮಾತನಾಡಿಲ್ಲ. ಹಾಗಾಗಿ ವಸತಿ ಶಾಲೆ ಪ್ರಾಚಾರ್ಯರು, ವಾರ್ಡ್ ಹಾಗೂ ಸ್ಟಾಫ್ ನರ್ಸ್ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.ದಾಳಿ ಮಾಹಿತಿ ನೀಡಿ: ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾದ ಹಾಗೂ ಪ್ರತಿನಿಧಿ ಸರಿಯಾಗಿ ಮಾಹಿತಿ ನೀಡದ ಕಾರಣ, ಕಾರ್ಮಿಕ ಇಲಾಖೆಯಿಂದ ಈ ವರೆಗೆ ಜಿಲ್ಲೆಯಲ್ಲಿ ಎಷ್ಟು ದಾಳಿ ಮಾಡಲಾಗಿದೆ? ಭಾಗವಹಿಸಿದ ಅಧಿಕಾರಿಗಳ ಮಾಹಿತಿ, ದಾಳಿಯಲ್ಲಿ ಪತ್ತೆಯಾದ ಮಕ್ಕಳ ಸಂಖ್ಯೆ, ಪ್ರಕರಣಗಳ ಸಂಖ್ಯೆ, ಎಷ್ಟು ಮಕ್ಕಳಿಗೆ ಪುನರ್ವಸತಿ ಕಲ್ಪಿಸಿದ ವಿವರ ಹಾಗೂ ಕಳೆದ ಸಭೆಯಲ್ಲಿ ನೀಡಿದ ಸೂಚನೆಗಳ ಅನುಪಾಲನಾ ವರದಿಯೊಂದಿಗೆ ಆಯೋಗದ ಬೆಂಗಳೂರಿನ ಕಚೇರಿಗೆ ೨೫ನೇ ತಾರೀಕಿನೊಳಗಾಗಿ ಸಲ್ಲಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
೫೪ ಬಾಲ ಗರ್ಭಿಣಿಯರು: ಜಿಲ್ಲೆಯಲ್ಲಿ ಏ. ೧ರಿಂದ ಈ ವರೆಗೆ ೫೪ ಬಾಲ ಗರ್ಭಿಣಿಯರು ಇರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ ಸಂದರ್ಭದಲ್ಲಿ, ೫೪ ಬಾಲ ಗರ್ಭಿಣಿಯರ ಪ್ರಕರಣಗಳ ಪೈಕಿ ಎಷ್ಟು ಪ್ರಕರಣಗಳಲ್ಲಿ ಎಂ.ಎಲ್.ಸಿ., ಎಷ್ಟು ಎಫ್‌ಐಆರ್ ಮಾಹಿತಿಯನ್ನು ಮುಂದಿನ ಸಭೆಗೆ ಸಲ್ಲಿಸಬೇಕು. ಆಧಾರ್ ಕಾರ್ಡ್ ವಯಸ್ಸಿನ ದೃಢೀಕರಣವಲ್ಲ. ಹಾಗಾಗಿ ಜನನ ಪ್ರಮಾಣಪತ್ರ ಪರಿಗಣಿಸಬೇಕು. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ನೀಡುವ ಒಪಿಡಿ ಚೀಟಿಗಳಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಮಮತೆಯ ತೊಟ್ಟಿ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ಆಸ್ಪತ್ರೆಗಳ ಮುಂಭಾಗದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ, ಪೋಕ್ಸೊ ಕಾಯ್ದೆ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.೨೦೧೬ರಿಂದ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ಬಂದಿದ್ದು, ೨೦೨೪ಕ್ಕೆ ೧೮ ವರ್ಷಗಳಾಗಲಿದೆ. ಮಾರ್ಗಸೂಚಿ ಅನ್ವಯ ೧೮ ವರ್ಷದೊಳಗಿನ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರಿಗೆ ಭಾಗ್ಯ ಲಕ್ಷ್ಮೀ ಬಾಂಡ್ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋಚಿಂಗ್ ಸೆಂಟರ್‌ಗಳ ಮೇಲೆ ನಿಗಾಕ್ಕೆ ಸೂಚನೆ: ಅನುಮತಿ ಪಡೆದ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿರುವ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ತೀವ್ರ ನಿಗಾವಹಿಸಬೇಕು. ಇಂತಹ ಕೋಚಿಂಗ್ ಸೆಂಟರ್‌ಗಳಲ್ಲಿ ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ? ಹಾಗಾಗಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ, ಆರ್‌ಟಿಇ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಸೂಚನಾ ಫಲಕದಲ್ಲಿ ಪ್ರದರ್ಶನ ಮಾಡಬೇಕು. ಸಿಸಿ ಕ್ಯಾಮರಾ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಮಾಹಿತಿಯನ್ನು ೧೫ ದಿನದೊಳಗಾಗಿ ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಕಳೆದ ಸಭೆಯಲ್ಲಿ ನೀಡಲಾದ ಸೂಚನೆಗಳ ಅನುಪಾಲನಾ ವರದಿಯನ್ನು ತರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆಯೋಗದ ಸದಸ್ಯರು, ಮಕ್ಕಳು ನಿಮಗೆ ಸಂಬಂಧ ಇಲ್ವಾ? ಕೆಲಸದಲ್ಲಿ ಇಷ್ಟು ಬೇಜವಾಬ್ದಾರಿ ಇರಬಾರದು. ಮಕ್ಕಳ ಸೌಲಭ್ಯಗಳ ಅನುಷ್ಠಾನದಲ್ಲಿ ತಾತ್ಸಾರ ಯಾಕೆ? ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ಸರ್ಕಾರದ ಪರವಾಗಿ ಆಯೋಗ ಕೆಲಸ ಮಾಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸಭೆಗೆ ಕಡ್ಡಾಯವಾಗಿ ಅನುಪಾಲನಾ ವರದಿಯನ್ನು ತರಬೇಕು ಎಂದು ಎಚ್ಚರಿಕೆ ನೀಡಿದರು.ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಆಯೋಗ ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಮಾಡುತ್ತಿದ್ದು, ಮಕ್ಕಳ ರಕ್ಷಣಾ ಆಯೋಗ ನೀಡಿದ ಸೂಚನೆ ಹಾಗೂ ಸಲಹೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ಲಿಖಿತ ವರದಿ ನೀಡುವಂತೆ ನಿರ್ದೇಶನ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣಾ ಸಂಗಳದ, ಡಿವೈಎಸ್‌ಪಿ ಎಂ.ಎಸ್. ಪಾಟೀಲ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))