ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಬೀಜಗಳು, ರಸಗೊಬ್ಬರಗಳು ಸಮರ್ಪಕವಾಗಿ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಗಾರು ೨೦೨೪ ಸಿದ್ಧತೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯುಂಟಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಸಂಗ್ರಹಿಸುವ ಕಾರ್ಯ ಮಾಡಬೇಕು ಎಂದರು.
ರೈತ ಸಂಪರ್ಕ ಕೇಂದ್ರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಸರಕಾರ ನಿಗದಿಮಾಡಿದ ದರಕ್ಕಿಂತ ಹೆಚ್ಚಿನ ಹಣವನ್ನು ರೈತರಿಂದ ವಸೂಲಾತಿ ಮಾಡುತ್ತಿರುವುದು ಕಂಡು ಬಂದರೆ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಮಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ೨,೬೬,೯೭೦ ಹೆಕ್ಟೇರ್ ನೀರಾವರಿ, ೪,೪೪,೪೦೦ ಹೆಕ್ಟೇರ್ ಕುಷ್ಕಿ ಸೇರಿದಂತೆ ಒಟ್ಟು ೭,೧೧,೩೭೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬಿತ್ತನೆ ಬೀಜದ ದಾಸ್ತಾನು ವಿವರ:ಬಸವನ ಬಾಗೇವಾಡಿ, ವಿಜಯಪುರ, ಮುದ್ದೇಬಿಹಾಳ, ಇಂಡಿ, ಸಿಂದಗಿ ತಾಲೂಕುಗಳ ವ್ಯಾಪ್ತಿಯಲ್ಲಿ ೫೧ ಕ್ವಿಂಟಲ್ ಹೆಸರು ಬೀಜಕ್ಕೆ ಬೇಡಿಕೆಯಿದ್ದು, ೨೪.೫೨ ಕ್ವಿಂಟಲ್‌ನ ವಿತರಣೆ ಮಾಡಲಾಗಿದೆ, ೪೯.೨೦ ಕ್ವಿಂಟಲ್ ಹೆಸರು ಬೀಜ ದಾಸ್ತಾನುವಿದೆ. ೧೪೦ ಕ್ವಿಂಟಲ್ ಸಜ್ಜೆ ಬೀಜಕ್ಕಾಗಿ ಬೇಡಿಕೆಯಿದ್ದು, ೧೯.೬೬ ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, ೩೯.೩೦ ಕ್ವಿಂಟಲ್ ಬೀಜ ದಾಸ್ತಾನುವಿದೆ. ೯೫೩೫ ಕ್ವಿಂಟಲ್ ಮೆಕ್ಕೆಜೋಳಕ್ಕೆ ಬೇಡಿಕೆಯಿದ್ದು, ೮೩೬.೮೬ ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, ೯೦೫ ಕ್ವಿಂಟಲ್ ಬೀಜ ದಾಸ್ತಾನುವಿದೆ. ೨೫೦ ಕ್ವಿಂಟಲ್‌ನಷ್ಟು ಸೂರ್ಯಕಾಂತಿ ಬೀಜಕ್ಕೆ ಬೇಡಿಕೆಯಿದ್ದು, ೫.೫೮ ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, ೩೬ ಕ್ವಿಂಟಲ್ ಬೀಜ ದಾಸ್ತಾನುವಿದೆ. ಶೇಂಗಾ ಬೀಜಕ್ಕೆ ೨೫ ಕ್ವಿಂಟಲ್ ಬೇಡಿಕೆಯಿದ್ದು, ೨೫ ಕ್ವಿಂಟಲ್ ಬೀಜ ದಾಸ್ತಾನು ಇದೆ. ಎಂದು ತಿಳಿಸಿದರು.
ರಸಗೊಬ್ಬರ ದಾಸ್ತಾನು ವಿವರ:ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಇದ್ದು, ೫೧೬೪೨.೪೫೬ ಮೆಟ್ರಿಕ್ ಟನ್ ಯೂರಿಯಾ, ೭೦೯೪.೯೨ ಮೆಟ್ರಿಕ್ ಟನ್ ಡಿಎಪಿ, ೧೯೧೪.೯೪೫ ಮೆಟ್ರಿ ಟನ್ ಎಂಒಪಿ, ೩೩೬೧೫.೩೯೫ ಮೆಟ್ರಿಕ್ ಟನ್ ಎನ್‌ಪಿಕೆಎಸ್, ೨೯೨೪.೬೫ ಮೆಟ್ರಿಕ್ ಟನ್ ಎಸ್‌ಎಸ್‌ಪಿ, ೧.೧೫ ಮೆಟ್ರಿಕ್ ಟನ್ ಕಾಂಪೋಸ್ಟ್ ರಸಗೊಬ್ಬರ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಸೇರಿದಂತೆ ಮುಂತಾದವರು ಇದ್ದರು.