ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಧ್ವನಿವರ್ಧಕ, ವಿದ್ಯುತ್ ಸಂಪರ್ಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಪೋಲೀಸರ ಅನುಮತಿ ಕಡ್ಡಾಯ. ಆಯಾ ಸ್ಥಳಗಳ ಗುರುತು ಮಾಡಿ ತಾವುಗಳು ಅರ್ಜಿಯನ್ನು ಇಲಾಖೆಗೆ ನೀಡಬೇಕು. ಇದರಿಂದ ಸುಲಭವಾಗಿ ಅನುಮತಿ ಪಡೆಯಲು ಸಾಧ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗೌರಿ ಗಣೇಶನ ಹಬ್ಬದಂದು ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಸ್ಥಾಪಿಸುವ ಆಯೋಜಕರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ತಿಳಿಸಿದರು.

ಪಟ್ಟಣದ ರಂಗನಾಥ ಕಲ್ಯಾಣ ಮಂಟಪದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಸ್ಥಾಪಿಸವವರು ಆ ಸ್ಥಳದಲ್ಲಿ ಕನಿಷ್ಠ ಒಬ್ಬರಾದರೂ ರಾತ್ರಿ ವೇಳೆ ಉಳಿದುಕೊಳ್ಳಬೇಕು. ಅವರ ಹೆಸರು, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಪೊಲೀಸ್ ಇಲಾಖೆಗೆ ನೀಡಬೇಕು ಎಂದರು.

ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಧ್ವನಿವರ್ಧಕ, ವಿದ್ಯುತ್ ಸಂಪರ್ಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಪೋಲೀಸರ ಅನುಮತಿ ಕಡ್ಡಾಯ. ಆಯಾ ಸ್ಥಳಗಳ ಗುರುತು ಮಾಡಿ ತಾವುಗಳು ಅರ್ಜಿಯನ್ನು ಇಲಾಖೆಗೆ ನೀಡಬೇಕು. ಇದರಿಂದ ಸುಲಭವಾಗಿ ಅನುಮತಿ ಪಡೆಯಲು ಸಾಧ್ಯವಾಗಲಿದೆ ಎಂದರು.

ಸ್ಥಳದಲ್ಲಿ ಅನಾಹುತಗಳ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಬೆಂಕಿ ನಂದಿಸುವ ಯಂತ್ರ, ಚೀಲಗಳಲ್ಲಿ ಮರಳನ್ನು ಇಟ್ಟಿರಬೇಕು. ಮೆರವಣಿಗೆ ಸಾಗುವ ಮಾರ್ಗದ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಎಲ್ಲಾ ಚಲನ ವಲನಗಳನ್ನ ಗಮನಿಸಲಾಗುವುದು, ಅತಿರೇಕದ ವರ್ತನೆಗೆ ಆಸ್ಪದ ನೀಡಬಾರದು ಎಂದರು.

ಗೌರಿ-ಗಣೇಶ ಪ್ರತಿಸ್ಥಾಪಿಸಲು ಪೊಲೀಸ್, ವಿದ್ಯುತ್ ಇಲಾಖೆ, ಅಗ್ನಿಶಾಮಕ ಸೇರಿದಂತೆ ಇತರೆ ಇಲಾಖೆಗಳಿಗೆ ತೆರಳಿ ಅನುಮತಿ ಪಡೆಯುವುದೇ ತುಂಬ ತೊಂದರೆಯಾಗುತ್ತಿದೆ. ಯಾವುದಾದರೂ ಒಂದು ಇಲಾಖೆ ಅಥವಾ ಒಂದೇ ಸೂರಿನಡಿ ಅನುಮತಿ ಸಿಗುಂತಾಗಬೇಕು. ಅಲ್ಲದೆ ವರ್ಷದಿಂದ ವರ್ಷಕ್ಕೆ ಕಠಿಣ ಕಾನೂನು ಜಾರಿಗೊಳ್ಳುತ್ತಿರುವುದರಿಂದ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಂತಹ ಹಬ್ಬವನ್ನು ಆಚರಣೆ ಮಾಡುವುದೇ ಕಷ್ಠವಾಗುತ್ತದೆ ಎಂದರು.

ಪೊಲೀಸ್ ಅಥವಾ ಇತರೆ ಇಲಾಖೆಯಿಂದ ವಿಧಿಸುವ ಕಠಿಣ ಷರತ್ತುಗಳನ್ನು ಕಡಿಮೆ ಮಾಡುವುದು ಸೇರಿದಂತೆ ಇತರೆ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.

ಈ ವೇಳೆ ತಹಸೀಲ್ದಾರ್ ಚೇತನಾ ಯಾದವ್, ಡಿವೈಎಸ್ಪಿ ಯು.ಡಿ. ಕೃಷ್ಣಕುಮಾರ್, ಸಿಪಿಐಗಳಾದ ಬಿ.ಜಿ. ಕುಮಾರ್, ವಿವೇಕಾನಂದ, ಹಿಂದೂ ಜಾಗರಣಾ ವೇದಿಕೆ ಮುಖಂಡ ಕೆ. ಚಂದನ್, ಬಾಲರಾಜು ಗೌಡಹಳ್ಳಿ ದೇವರಾಜು, ನೆಲಮನೆ ಗುರುಪ್ರಸಾದ್, ಮುಂಡುಗದೊರೆ ಶ್ರೀಕಂಠು, ಮುಸ್ಲಿಂ ಒಕ್ಕೂಟದ ಅಪ್ಸರ್ ಪಾಷ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.