ಶಾಲಾ ದಿನಗಳಲ್ಲಿ ನಡೆದ ಘಟನೆ, ಶಿಕ್ಷಕರ ಮಾರ್ಗದರ್ಶನ ಹಾಗೂ ಸ್ನೇಹಿತರೊಂದಿಗಿನ ಒಡನಾಟ ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು.

ಕಂಪ್ಲಿ: ಗುರುಗಳು ಬೋಧಿಸಿದ ಉತ್ತಮ ಆದರ್ಶ, ಮೌಲ್ಯ ಮತ್ತು ಸಂಸ್ಕಾರ ಜೀವನದುದ್ದಕ್ಕೂ ಪಾಲಿಸುವುದೇ ಅವರಿಗೆ ಸಲ್ಲಿಸುವ ಅನನ್ಯ ಗುರುಕಾಣಿಕೆಯಾಗಿದೆ ಎಂದು ಶಾಲಾ ಸಂಸ್ಥಾಪಕ ಹಾಗೂ ನಿವೃತ್ತ ಶಿಕ್ಷಕ ಎಂ.ಎಸ್. ಗಂಗಾಧರಯ್ಯ ಹೇಳಿದರು.

ಪಟ್ಟಣದ ಸತ್ಯನಾರಾಯಣಪೇಟೆಯ ಸಹಿಪ್ರಾ ಶಾಲೆಯಲ್ಲಿ 2001-02ನೇ ಸಾಲಿನ 7ನೇ ತರಗತಿಯ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರು ಬೋಧಿಸುವ ಪಾಠಗಳು ಕೇವಲ ಪಠ್ಯ ವಿಷಯಗಳಿಗೆ ಸೀಮಿತವಾಗಿರದೇ ಜೀವನದ ಮೌಲ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂದು ಕಲಿತ ಉತ್ತಮ ಗುಣ, ಶಿಸ್ತು, ಸಂಸ್ಕಾರ ಹಾಗೂ ಮಾನವೀಯ ಮೌಲ್ಯ ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಸಮಾಜದಲ್ಲಿ ಉತ್ತಮ ಸಂಸ್ಕೃತಿ ಬೆಳೆಸಬೇಕು. ಹಳೆ ವಿದ್ಯಾರ್ಥಿಗಳು ಹಲವು ವರ್ಷಗಳ ನಂತರವೂ ಶಿಕ್ಷಕರನ್ನು ಸ್ಮರಿಸಿ ಗೌರವಿಸುತ್ತಿರುವುದು ಸಂತಸದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 25 ವರ್ಷಗಳ ಹಿಂದೆ ತಮ್ಮಗೆ ಪಾಠ ಬೋಧಿಸಿದ್ದ ಶಿಕ್ಷಕರಾದ ಭಾರತಿ, ದ್ರೌಪತಿ, ರೇವಯ್ಯ, ಟಿ.ಶಶಿಧರ, ನಾಗಯ್ಯಸ್ವಾಮಿ, ದೊಡ್ಮನಿ ಹಾಗೂ ಎಂ.ಎಸ್. ಗಂಗಾಧರಯ್ಯ ಅವರನ್ನು ಹಳೆ ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿದರು. ಶಿಕ್ಷಕರ ಪಾದ ತೊಳೆದು ಪೂಜೆ ಸಲ್ಲಿಸುವ ಮೂಲಕ ಗುರುಭಕ್ತಿ ಮೆರೆದರು.

ಬಳಿಕ ಹಳೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ನೆನಪು ಮೆಲುಕು ಹಾಕಿದರು. ಶಾಲಾ ದಿನಗಳಲ್ಲಿ ನಡೆದ ಘಟನೆ, ಶಿಕ್ಷಕರ ಮಾರ್ಗದರ್ಶನ ಹಾಗೂ ಸ್ನೇಹಿತರೊಂದಿಗಿನ ಒಡನಾಟ ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು. ಹಲವು ವರ್ಷಗಳ ಬಳಿಕ ಒಂದೆಡೆ ಸೇರಿದ್ದ ಹಳೆ ವಿದ್ಯಾರ್ಥಿಗಳಲ್ಲಿ ಹಳೆಯ ಸ್ನೇಹ ಮತ್ತೆ ಗಟ್ಟಿಗೊಂಡು ಕಾರ್ಯಕ್ರಮ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಇದೇ ವೇಳೆ ನಿಧನರಾದ ಹಳೆ ವಿದ್ಯಾರ್ಥಿಗಳು ಹಾಗೂ ಆತ್ಮೀಯರಾದ ಭೋಗೇಶಾಚಾರ್, ಲಲಿತಮ್ಮ, ಸಚ್ಚಿದಾನಂದ ಮತ್ತು ಸೋಮಪ್ಪ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

ಸ್ನೇಹ ಸಮ್ಮೇಳನದ ಅಧ್ಯಕ್ಷ ರವಿ, ಪದಾಧಿಕಾರಿ ನಾಗಾರ್ಜುನ, ವಿಷ್ಣು, ಭಾಸ್ಕರ, ಎಜಾಜ್, ಫಕ್ರುದ್ದೀನ್, ರಾಘವೇಂದ್ರ, ಎನ್.ಶ್ರೀನಿವಾಸ್, ವೆಂಕಟೇಶ್, ದಾವೂದ್, ಶ್ರೀನಿವಾಸ್, ರಮೇಶ್, ಗಾಜಿ ಅಹಮದ್, ಸಾವಿತ್ರಿ, ದೇವಿಕಬಾಯಿ, ವಿಜಯಲಕ್ಷ್ಮೀ, ನಾಗಮಣಿ, ಡಿ.ರೇಖಾ, ವೀಣಾ, ಮಂಜುಶ್ರೀ, ಪಾರ್ವತಿ, ರಾಧಾ, ಕುಲುಸ್ಮ, ಸಲ್ಮಾ, ಶಶಿರೇಖಾ ಸೇರಿದಂತೆ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.