ಸಾರಾಂಶ
ಡಿ.ಸುಧಾಕರ್ ಸೇರಿ ಮಹನೀಯರಿಂದ ಪೂಜೆ । ದಾರಿಯುದ್ಧಕ್ಕೂ ವಿವಿಧ ವಾದ್ಯಗಳ ಶಬ್ದ । ಮತ್ತೇ ಸಚಿವರಾದ ಪಾಲಾದ ಮುಕ್ತ ಬಾವುಟಕನ್ನಡಪ್ರಭ ವಾರ್ತೆ ಹಿರಿಯೂರು
ಬಿರು ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಭಕ್ತರು ತೇರುಮಲ್ಲೇಶ್ವರ ಸ್ವಾಮಿಯ ವಿಜೃಂಭಣೆಯ ಬ್ರಹ್ಮ ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಮೆರೆದರು.ಭಕ್ತರ ಕೇಕೆ ಹರ್ಷೋದ್ಘಾರಗಳ ನಡುವೆ ಮದ್ಯಾಹ್ನ 1:25ಕ್ಕೆ ಮೆಘಾ ನಕ್ಷತದಲ್ಲಿ ಸಾವಿರಾರು ಭಕ್ತರು ತೇರು ಎಳೆಯಲು ಶುರು ಮಾಡಿದರು. ರಥದ ಚಕ್ರ ಚಲಿಸುತ್ತಿದ್ದಂತೆ ಭಕ್ತರು ಹರಕೆಯ ಬಾಳೆಹಣ್ಣು ಎಸೆಯಲಾರಂಭಿಸಿದರು. ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು ಸೇರಿದಂತೆ ಸಹಸ್ರಾರು ಜನ ತೇರು ಎಳೆಯುವ ದೃಶ್ಯವನ್ನು ಕಣ್ತುಂಬಿಕೊಂಡರು.
ಗುರುವಾರ ಬೆಳಗ್ಗೆ ವೇದಾವತಿ ನದಿಯಲ್ಲಿ ಶಿವ ಧನುಸ್ಸಿಗೆ ಪೂಜೆ ಸಲ್ಲಿಸಿ ಗಂಗಾಸ್ನಾನ ನೆರವೇರಿಸಿ ಸ್ವಾಮಿಗೆ ಮಹಾಭಿಷೇಕ ನಡೆಸಲಾಯಿತು.ತಾಲೂಕಿನ ಬೀರೇನಹಳ್ಳಿ ಮಜುರೆ ಕರಿಯಣ್ಣನ ಹಟ್ಟಿ ವೀರ ಕರಿಯಣ್ಣ ದೇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ವಿವಿಧ ಬಗೆಯ ಹೂವುಗಳು, ಅಲಂಕಾರಿಕ ಬಟ್ಟೆಗಳು ಹಾಗೂ ಬೃಹತ್ ಗಾತ್ರದ ಹಾರಗಳಿಂದ ಶೃಂಗಾರಗೊಂಡಿದ್ದ ರಥದಲ್ಲಿ ಸ್ವಾಮಿಯನ್ನು ಕೂರಿಸಿ ಮುಜರಾಯಿ ಅಧಿಕಾರಿ ಹಾಗೂ ತಹಸೀಲ್ದಾರ್ ರಾಜೇಶ್ ಕುಮಾರ್ ಪೂಜೆ ಸಲ್ಲಿಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಬಿಜೆಪಿ ಮುಖಂಡರಾದ ಲಕ್ಷ್ಮಿಕಾಂತ್, ಅಭಿನಂದನ್ ಮುಂತಾದವರು ಪೂಜೆ ಸಲ್ಲಿಸಿದ ನಂತರ ಪ್ರತಿ ವರ್ಷದಂತೆ ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ಶುರುವಾಯಿತು.ಮುಕ್ತಿ ಬಾವುಟದ ಹರಾಜಿನ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಹೊರಟ ರಥ ವಿವಿಧ ರೀತಿಯ ವಾದ್ಯ ಮೇಳಗಳು ಹಾಗೂ ಸಹಸ್ರಾರು ಜನರ ಹರ್ಷೋದ್ಘಾರಗಳೊಂದಿಗೆ ವಾಸವಿ ರಸ್ತೆಯ ಮೂಲಕ ಸಿದ್ಧನಾಯಕ ವೃತ್ತ ತಲುಪಿತು. ರಥೋತ್ಸವ ಸಾಗಿದ ದಾರಿಯ ಇಕ್ಕೆಲಗಳಲ್ಲೂ ಭಕ್ತರು ನಿಂತು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿಕೊಂಡರು.
ದಾರಿಯುದ್ಧಕ್ಕೂ ಕಹಳೆ, ಡೋಲು ಸೇರಿದಂತೆ ವಿವಿಧ ರೀತಿಯ ವಾದ್ಯಗಳ ಶಬ್ದದೊಂದಿಗೆ ನೂರಾರು ಯುವಕರು ಕುಣಿದು ಸಂಭ್ರಮಿಸಿದರು. ಬ್ರಹ್ಮ ರಥೋತ್ಸವದ ಪ್ರಯುಕ್ತ ದಾರಿಯುದ್ಧಕ್ಕೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಉಚಿತ ಮಜ್ಜಿಗೆ, ನೀರು ವಿತರಣೆ ಮಾಡಲಾಗುತ್ತಿತ್ತು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬಿಸಿಲಿದ್ದರೂ ಸಹ ಭಕ್ತರ ಆಗಮನದ ಸಂಖ್ಯೆಗೆ ಕೊರತೆ ಇರಲಿಲ್ಲ. ಜಾತ್ರೆಯ ಅಂಗವಾಗಿ ಸುಗಮ ಹಾಗೂ ಸುರಕ್ಷಿತ ರಥೋತ್ಸವ ಜರುಗಲು ತಾಲೂಕು ಆಡಳಿತ, ಪೊಲೀಸ್ ಇಲಾಖೆ, ನಗರಸಭೆ ಹಾಗೂ ಜಾತ್ರಾ ಸಮಿತಿಯವರು ಸಕಲ ರೀತಿಯ ಸಿದ್ಧತೆ ಮಾಡಿಕೊಂಡು ಸುಸೂತ್ರವಾಗಿ ರಥ ಸಾಗಲು ಅನುವು ಮಾಡಿಕೊಟ್ಟರು.ದೇವಸ್ಥಾನ ತಲುಪುವ ಎಲ್ಲಾ ರಸ್ತೆಗಳಲ್ಲೂ ಬ್ಯಾರಿಕೇಡ್ ಹಾಕಿ ದ್ವಿಚಕ್ರ ವಾಹನ, ಕಾರು ಮುಂತಾದ ವಾಹನಗಳು ಒಳ ಬರದಂತೆ ನಿರ್ಬಂಧಿಸಿ ಭಕ್ತರ ಸುಗಮ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ರಥೋತ್ಸವ ಸಿದ್ದನಾಯಕ ವೃತ್ತ ತಲುಪುವವರೆಗೆ ಜನ ಜಾತ್ರೆಯೇ ನೆರೆದಿದ್ದು ಸಂಜೆವರೆಗೂ ನೂರಾರು ಭಕ್ತರು ಆಗಮಿಸಿ ಹರಕೆ ತೀರಿಸಿ ಹೋಗುವುದು ಮಾಮೂಲಾಗಿತ್ತು. ರಸ್ತೆಯ ಅಕ್ಕಪಕ್ಕ ಮಕ್ಕಳ ಆಟದ ಸಾಮಾಗ್ರಿಗಳು, ಮಹಿಳೆಯರ ಸೌಂದರ್ಯ ವಸ್ತುಗಳು, ಸಿಹಿ ತಿನಿಸುಗಳ ಅಂಗಡಿಗಳಂತಹ ನೂರಾರು ಅಂಗಡಿಗಳ ಮುಂದೆ ಮಕ್ಕಳು ಮಹಿಳೆಯರು ಸಾಲುಗಟ್ಟಿ ವ್ಯಾಪಾರಕ್ಕೆ ನಿಂತ ದೃಶ್ಯ ಸಾಮಾನ್ಯವಾಗಿತ್ತು.ಈ ವೇಳೆ ತಹಸೀಲ್ದಾರ್ ರಾಜೇಶ್ ಕುಮಾರ್, ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ಎ ವಾಸಿಂ, ಜಾತ್ರಾ ಸಮಿತಿ ಅಧ್ಯಕ್ಷ ನಾಗೇಂದ್ರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇ ಗೌಡ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಬಿಜೆಪಿ ಮುಖಂಡರಾದ ಎನ್.ಆರ್.ಲಕ್ಷ್ಮಿಕಾಂತ್, ಅಭಿನಂದನ್ ಮುಖಂಡರಾದ ಗೌರೀಶ್ ನಾಯಕ, ಬಿ.ಎನ್.ಪ್ರಕಾಶ್, ಜಿ.ಎಲ್.ಮೂರ್ತಿ, ಚಂದ್ರಶೇಖರ್ ಹಾಗೂ ಅಧಿಕಾರಿಗಳು, ದೇವಸ್ಥಾನದ ಕೈವಾಡಸ್ಥರು, ಸಾವಿರಾರು ಭಕ್ತಾಧಿಗಳು ಹಾಜರಿದ್ದರು.
26.5 ಲಕ್ಷಕ್ಕೆ ಮುಕ್ತ ಬಾವುಟ ಹರಾಜು:ರಥೋತ್ಸವಕ್ಕೂ ಮುನ್ನ ಸ್ವಾಮಿಯ ಮುಕ್ತಿ ಬಾವುಟ ಹರಾಜು ಹಾಕುವುದು ಪ್ರತಿವರ್ಷದ ಪ್ರಕ್ರಿಯೆಯಾಗಿದ್ದು, ಮುಕ್ತಿ ಬಾವುಟ ಪಡೆದವರಿಗೆ ಯಶಸ್ಸು, ಗೆಲುವು ಸಿಗುತ್ತದೆ ಎಂಬುದು ಪ್ರತೀತಿ. ಕಳೆದ 3 ವರ್ಷಗಳಿಂದಲೂ ತೇರುಮಲ್ಲೇಶ್ವರ ಸ್ವಾಮಿಯ ಮುಕ್ತಿ ಬಾವುಟವನ್ನು ಸಚಿವ ಡಿ.ಸುಧಾಕರ್ ಪಡೆಯುತ್ತಾ ಬಂದಿದ್ದಾರೆ. 2022ರಲ್ಲಿ 10 ಲಕ್ಷಕ್ಕೆ, 2023ರಲ್ಲಿ 12 ಲಕ್ಷಕ್ಕೆ, 2024ರಲ್ಲಿ 18 ಲಕ್ಷಕ್ಕೆ ಹಾಗೂ ಈ ಬಾರಿ 26.5 ಲಕ್ಷಕ್ಕೆ ಸಚಿವರು ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು. ಬಿಜೆಪಿಯ ಎನ್.ಆರ್.ಲಕ್ಷ್ಮಿಕಾಂತ್, ಅಭಿನಂದನ್, ಕಾಂಗ್ರೆಸ್ ಮುಖಂಡರಾದ ಗೌರೀಶ್ ನಾಯಕ, ಖಾದಿ ರಮೇಶ್, ಸುರೇಶ್ ಬಾಬು, ಈರಲಿಂಗೇಗೌಡರು ಬಾವುಟದ ಹರಾಜಿನಲ್ಲಿ ಒಂದೊಂದೇ ಲಕ್ಷ ಏರಿಸುತ್ತಾ ಬಂದರೂ ಸಹ ಕೊನೆಗೆ 26.5 ಲಕ್ಷಕ್ಕೆ ಮುಕ್ತಿ ಬಾವುಟ ಸಚಿವರ ಪಾಲಾಯಿತು.