ಸುತ್ತೂರು ಮಠ ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿದೆ

| Published : Jan 29 2025, 01:35 AM IST

ಸಾರಾಂಶ

ಸುತ್ತೂರು ಜಾತ್ರೆಯನ್ನು 6 ದಿನಗಳ ಕಾಲ ನಡೆಸುವ ಮೂಲಕ ನಮ್ಮ ಸಂಸ್ಕೃತಿಯ ಭಾಗವಾದ ಕೃಷಿ, ನಾಟಕ, ಕುಸ್ತಿ,

ಕನ್ನಡಪ್ರಭ ವಾರ್ತೆ ನಂಜನಗೂಡು

ಸುತ್ತೂರು ಮಠ ಈ ವೈಜ್ಞಾನಿಕ ಯುಗದಲ್ಲೂ ನಮ್ಮ ಕೃಷಿ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ಜವಳಿ, ಸಕ್ಕರೆ, ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ಹೇಳಿದರು.

ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಚಿತ್ರಕಲೆ, ಗಾಳಿಪಟ ಸ್ಪರ್ಧೆ, ದನಗಳ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ವಿಜಯಪುರ ಭಾಗದಲ್ಲಿ ಜಾತ್ರೆಗಳು ಒಂದು ದಿನ ನಡೆದರೆ ಹೆಚ್ಚು, ಆದರೆ ಶ್ರೀಗಳು ಸುತ್ತೂರು ಜಾತ್ರೆಯನ್ನು 6 ದಿನಗಳ ಕಾಲ ನಡೆಸುವ ಮೂಲಕ ನಮ್ಮ ಸಂಸ್ಕೃತಿಯ ಭಾಗವಾದ ಕೃಷಿ, ನಾಟಕ, ಕುಸ್ತಿ, ಭಜನೆ, ಚಿತ್ರಕಲೆ, ಸಂಗೀತ ಕಲೆಗಳಿಗೆ ಜಾತ್ರೆಯಲ್ಲಿ ಅವಕಾಶ ನೀಡಿ ನಮ್ಮ ಪರಂಪರೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ದನಗಳ ಜಾತ್ರೆಯಲ್ಲಿ ಭೇಟಿಯಾದ ಒಬ್ಬ ರೈತರು ಹಳ್ಳಿಕಾರ್ ತಳಿಯನ್ನು ರಕ್ಷಿಸುವ ಸಲುವಾಗಿ ನೂರು ಹಳ್ಳಿಕಾರ್ ದನಗಳನ್ನು ಉಚಿತವಾಗಿ ಸಾಕಲು ನೀಡಿದ್ದೇನೆ ಎಂದಾಗ ನಾನು ಆಶ್ಚರ್ಯಚಕಿತನಾದೆ, ಸುತ್ತೂರು ಶ್ರೀ ಮಠದ ಪ್ರೇರಣೆಯಿಂದಾಗಿ ಇಂತಹ ಸಮಾಜ ಸೇವಾ ಕಾರ್ಯಗಳು ಸಾಧ್ಯವಾಗಿವೆ ಎಂದರು.

ನಮ್ಮ ಉತ್ತರ ಕರ್ನಾಟಕದ ಗಡಿಭಾಗದಲ್ಲಿ ಸಿದ್ದೇಶ್ವರ ಜಾತ್ರೆ ನಡೆಸುತ್ತೇವೆ, ಸಿದ್ದೇಶ್ವರ ಸ್ವಾಮೀಜಿ ನೀರಿಲ್ಲದ ಊರುಗಳಿಗೆ ಕೆರೆಗಳನ್ನು ಕಟ್ಟಿಸುವ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದರು, ಜಗತ್ತಿಗೆ ಧಾರ್ಶನಿಕರಾಗಿ ಪ್ರವಚನ ನೀಡಿದ್ದರು, ಅಂತಹ ಮಹಾತ್ಮರನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸುತ್ತೂರು ಮಠಕ್ಕೆ ಸಲ್ಲುತ್ತದೆ, ಮೈಸೂರು ದಸರಾ ನಂತರ ಸುತ್ತೂರು ಜಾತ್ರೆ ನಾಡಿನಾದ್ಯಂತ ಪ್ರಸಿದ್ದವಾಗಿದೆ ಎಂದು ಹೇಳಿದರು.

ಶಾಸಕ ಎಚ್. ವಿಶ್ವನಾಥ್ ಮಾತನಾಡಿ, ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಬದುಕನ್ನು ಪಡೆದುಕೊಂಡವನು ನಾನು, ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡೆ, ಚುನಾವಣೆ, ರಾಜಕೀಯಗಳ ಪರಿಚಯವಾಯಿತು, ರಾಜೇಂದ್ರ ಶ್ರೀಗಳಿಂದ ಜೀವನದಲ್ಲಿ ಶಿಸ್ತು,ಸಮಯಪಾಲನೆಯನ್ನು ಕಲಿತೆ,ಮಠದ ಪ್ರೇರಣೆಯಿಂದಾಗಿಯೇ ನನ್ನ ಮಕ್ಕಳಿಗೆ ಸಾಮೂಹಿಕ ಸರಳ ವಿವಾಹ ಮಾಡಿದೆ,ಶ್ರೀ ಮಠ ಅಕ್ಷರ-ಆರೋಗ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನ ಸೇವೆ ಮಾಡಿದೆ ಎಂದು ಹೇಳಿದರು.

ಉಚಿತ ಭಾಗ್ಯಗಳಿಂದ ರಾಜ್ಯ-ದೇಶ ಉದ್ದಾರವಾಗಲ್ಲ

ದೆಹಲಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ 15 ಉಚಿತ ಕೊಡುಗೆಗಳನ್ನು ಘೋಷಿಸಿವೆ, ಉಚಿತ ಭಾಗ್ಯಗಳಿಂದ ರಾಜ್ಯ-ದೇಶ ಉದ್ದಾರವಾಗಲ್ಲ, ಚುನಾಣೆಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳು ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ, ಆದ್ದರಿಂದ ಆಳುವವರು ಉತ್ತಮವಾಗಿರಬೇಕು, ಯಾವುದೇ ದೇಶ ಅಥವಾ ರಾಜ್ಯ 1 ರಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ನೀಡಿದರೆ ದೇಶ ಅಭಿವೃದ್ಧಿ ಹೊಂದುತ್ತದೆ, ನಾನು ಶಿಕ್ಷಣ ಸಚಿವನಾಗಿದ್ದಾಗ ಇಲಾಖೆಯಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ್ದೆ, ಮಠಗಳು, ಇದರಿಂದ ಅನೇಕ ಮಠ ಮಾನ್ಯರು, ಮುಲ್ಲಾಗಳು ಪಟ್ಟಭದ್ರರು ನನ್ನ ಮೇಲೆ ಮೂಗಿಬಿದ್ದಿದ್ದರು, ಆಗ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತ್ರ ನನ್ನ ಕ್ರಮವನ್ನು ಮೆಚ್ಚಿ, ಬೆಂಬಲಿಸಿದ್ದರು ಎಂದು ಹೇಳಿದರು.

ಕೆಸರುಗದ್ದೆ ಓಟದ ಸ್ಪರ್ಧೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು. 5ನೇ ತರಗತಿ ವಿದ್ಯಾರ್ಥಿ ಕುಂಚಕಲೆ ಪ್ರದರ್ಶನ ನೀಡಿದರು. ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಪಾದಂಗಳು, ಅರ್ಜುನ್ ಗುರೂಜಿ ಸಾನಿಧ್ಯ ವಹಿಸಿದ್ದರು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್, ಸದಸ್ಯರಾದ ನರೇಂದ್ರ, ಗೀತಾ ಇದ್ದರು. ಬಿ.ಎಲ್. ತ್ರಿಪುರಾಂತಕ ಸ್ವಾಗತಿಸಿದರು.