ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಅಡಿಬೈಲು ಬಿಂದಿಗಮ್ಮರವರ ಜಾತ್ರೆ ಭರತೂರು ಬಳಿ ಹೇಮಾವತಿ ಹೊಳೆ ಬದಿಯಲ್ಲಿ ಅತ್ಯಂತ ವೈಭವದಿಂದ ನೆರವೇರಿತು.ಬೆಳಗ್ಗೆ ೬ ಗಂಟೆಗೆ ಬೆಟ್ಟದ ಮೇಲಿರುವ ಶ್ರಿ ರಂಗನಾಥಸ್ವಾಮಿ ದೇವಾಲಯದಿಂದ ಬಿಂದಿಗಮ್ಮ ದೇವಿ ಕಳಸವನ್ನು ಕೈಚೀಲದಲ್ಲಿ ಹೊಳೆ ಬದಿ ಇರುವ ಬಿಂದಿಗಮ್ಮ ಮಂಟಪಕ್ಕೆ ರಂಗನಾಥ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಟಿಯೊಂದಿಗೆ ಕರೆ ತರಲಾಯಿತು. ಬೆಳಗ್ಗೆ ೮ ಗಂಟೆಯಿಂದ ಭಕ್ತರಿಗೆ ದೇವಿ ಮತ್ತು ರಂಗನಾಥಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಸುಮಾರು ೨೫ ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಮಾಡಿ ಪುನೀತರಾದರು.
ತಹಸೀಲ್ದಾರ್ ಸಿ. ಎಸ್. ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಚಂದ್ರಶೇಖರ್, ಜಗದೀಶ್ ಕುಟುಂಬದವರು, ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ನಿರ್ದೇಶಕರು ಭಕ್ತರಿಗೆ ದೇವರ ದರ್ಶನ ಮಾಡಲು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಗಂಗಾಧರ್, ಸಬ್ ಇನ್ಸ್‌ಪೆಕ್ಟರ್ ಜನಾಬಾಯಿ ಕಡಪಟ್ಟಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದಲ್ಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿ ವರ್ಷ ಹೊಳೆ ಬದಿ ದೇವಸ್ಥಾನದ ಬಳಿಗೆ ಹೋದ ವಾಹನಗಳು, ಅದೇ ದಾರಿಯಲ್ಲಿ ವಾಪಾಸು ಬರಬೇಕಾದ್ದರಿಂದ, ವಾಹನಗಳ ಸಂಚಾರಕ್ಕೆ ಭಾರಿ ಅವ್ಯವಸ್ಥೆಯಾಗುತ್ತಿತ್ತು. ಈ ವರ್ಷ ವಾಹನಗಳು ಹೊಳೆ ದಾಟಿಕೊಂಡು ಕಲ್ಲರೆ ಗ್ರಾಮದ ಮೇಲೆ ವಾಪಾಸು ತೆರಳಲು ಅವಕಾಶ ಮಾಡಿದ್ದರಿಂದ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಯಿತು.ಸಂಜೆ ಚಂದ್ರೋದಯವಾದ ನಂತರ ೭.೩೦ಕ್ಕೆ ಸರಿಯಾಗಿ ಬಿಂದಿಗಮ್ಮರವರ ಕಳಸವನ್ನು ಅರ್ಚಕ ಕೃಷ್ಣಮೂರ್ತಿರವರ ಬೋಳಿಸಿದ ತಲೆ ಮೇಲಿಟ್ಟು ಬಿಟಂಗಿಯಾಗಿ ಬೆಟ್ಟದ ಮೇಲಿರುವ ಶ್ರೀ ರಂಗನಾಥಸ್ವಾ,ಮಿ ದೇವಾಲಯಕ್ಕೆ ಕಳುಹಿಸಿ ಕೊಡಲಾಯಿತು. ಕಳಸ ಏಳು ಊರುಬಾಗಿಲುಗಳನ್ನು ದಾಟಿ ಬೆಟ್ಟಕ್ಕೆ ಮೇಲೇರುವ ೧೦ ಕಿ.ಮೀ. ದೂರವನ್ನು ಕೇವಲ ಒಂದು ಗಂಟೆಯಲ್ಲಿ ಕ್ರಮಿಸಿತು. ಕಳಸ ಊರುಬಾಗಿಲು ಬಳಿಗೆ ಬರುವ ಮೊದಲು ಸ್ಥಳೀಯರು ಬಾಗಿಲು ಬಳಿ ಅಕ್ಕಿಯಿಂದ ಹಸೆಯನ್ನು ಹಾಕಿದ್ದರು. ಕಳಸ ತಲೆ ಬಾಗಿ ರಂಗೋಲಿ ಮುಟ್ಟಿ ಮುಂದಕ್ಕೆ ಹೋದ ನಂತರ, ಹಸೆ ಅಕ್ಕಿಯನ್ನು ಎಲ್ಲರೂ ಪಡೆದುಕೊಂಡು ಮನೆಗೆ ತೆರಳಿದರು. ಭಾನುವಾರ ಬೆಟ್ಟದ ಮೇಲಿರುವ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಗಲು ಜಾತ್ರೆ ನಡೆಯಿತು.
* ಪಾಯಿಂಟ್: *ಜಾತ್ರೆ ಆವರಣದಲ್ಲಿ ಹೊಟ್ಟೆಪಾಡಿಗಾಗಿ ಬಾಲಕಿಯೊಬ್ಬಳು ರಾಕ್ಷಸನ ವೇಷ ಹಾಕಿಕೊಂಡು ಜನರ ಗಮನ ಸೆಳೆದಳು. ನೆರೆದಿದ್ದ ಭಕ್ತರು ಕಾಣಿಕೆ ನೀಡಿ ಸಹಕರಿಸಿದರು.