ಸಾರಾಂಶ
ಸದಸ್ಯರು-ಮುಖ್ಯಾಧಿಕಾರಿಗಳ ಮಧ್ಯೆ ಆರೋಪ ಪ್ರತ್ಯಾರೋಪ ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಅಭಿವೃದ್ಧಿ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಬೇಕಾದ ಪುರಸಭಾ ಸದಸ್ಯರು ಹಾಗೂ ಮುಖ್ಯಾಧಿಕಾರಿ ತಮ್ಮ ಆಡಳಿತದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವ ಮೂಲಕ ಸಂಘರ್ಷಕ್ಕೆ ಇಳಿದು ಸಭೆ ಮುಂದೂಡಿದ ಘಟನೆ ಸೋಮವಾರ ಪಟ್ಟಣದ ಪುರಸಭೆಯಲ್ಲಿ ನಡೆಯಿತು. ಪುರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆ ಹಾಗೂ 2025-26ನೇ ಸಾಲಿನ ಆಯವ್ಯಯ ಕುರಿತ ಬಜೆಟ್ ಮಂಡನೆ ಸಭೆಯು ಕೆಲ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳ ನಡುವೆ ಸಂಘರ್ಷಕ್ಕಷ್ಟೇ ಸೀಮಿತವಾಯಿತು. ಆರಂಭದಿಂದಲೂ ಅಜೆಂಡಾದಲ್ಲಿನ ಚರ್ಚಾ ವಿಷಯಗಳೇ ಸಭೆಯಲ್ಲಿ ಪ್ರಸ್ತಾಪವಾಗಲಿಲ್ಲ.ಪುರಸಭೆ ಸದಸ್ಯರಾದ ಶಂಕರಪ್ಪ, ರಾಮಚಂದ್ರಪ್ಪ ಮಾತನಾಡಿ, ಶ್ರೀಮಂತರಿಗೆ ಒಂದೇ ದಿನದಲ್ಲಿ ಸಿಗುವ ಈ-ಸ್ವತ್ತು, ಬಡವರಿಗೆ ಯಾಕೆ ಸಿಗುವುದಿಲ್ಲ. ಅನಧಿಕೃತ ಬಡಾವಣೆಗಳಿಗೆ ನಿಯಮಬಾಹಿರವಾಗಿ ಈ-ಸ್ವತ್ತು ನೀಡಿದ್ದೀರಾ ಎಂದು ಆರೋಪಿಸಿದರು.
ಮುಖ್ಯಾಧಿಕಾರಿ ತಿಮ್ಮರಾಜು ಪ್ರತಿಕ್ರಿಯಿಸಿ, ನಿಯಮಾನುಸಾರ ಈ-ಸ್ವತ್ತು ನೀಡಲಾಗುತ್ತಿದೆ. ದಾಖಲೆಗಳು ಇಲ್ಲದೇ ಆಧಾರ ರಹಿತ ಆರೋಪ ಮಾಡಬೇಡಿ. ನಿಮಗೇ ಬೇಕಾದವರಿಗೆ ಸಾಕಷ್ಟು ಈ-ಸ್ವತ್ತು ಕೊಡಿಸಿದ್ದೀರಾ, ಆಗ ನಿಮಗೆ ಕಾನೂನು, ನಿಯಮಗಳು ನೆನಪಿಗೆ ಬರಲಿಲ್ಲವೇ ಎಂದು ತಿರುಗೇಟು ನೀಡಿದರು.ಪುರಸಭೆ ಸದಸ್ಯ ಶ್ರೀನಿವಾಸ್ ಆರೋಗ್ಯ ಶಾಖೆಗೆ ಸಂಬಂಧಪಟ್ಟಂತೆ ಬಂದಿರುವ ಆದಾಯ ಹಾಗೂ ಖರ್ಚು-ವೆಚ್ಚದ ಲೆಕ್ಕ ಪತ್ರಗಳ ಪೂರ್ಣ ಮಾಹಿತಿಯನ್ನು ನೀಡುವಂತೆ ಪಟ್ಟು ಹಿಡಿದರು. ಸಭೆಯ ಅಜೆಂಡಾದಲ್ಲಿ ಈ ಮೊದಲೇ ವಿಷಯ ಸೇರ್ಪಡೆ ಮಾಡಿದ್ದರೆ ಅಗತ್ಯ ದಾಖಲಾತಿಗಳನ್ನು ಒದಗಿಸಬಹುದಾಗಿತ್ತು. ತಕ್ಷಣಕ್ಕೆ ಮಾಹಿತಿ ನೀಡಲು ಕಷ್ಟವಾಗುತ್ತದೆ. ಮುಂದಿನ ಸಭೆಯಲ್ಲಿ ಅಗತ್ಯ ದಾಖಲಾತಿಗಳನ್ನು ನೀಡುವುದಾಗಿ ಮುಖ್ಯಾಧಿಕಾರಿ ತಿಮ್ಮರಾಜು ಸಮಜಾಯಿಷಿ ನೀಡಿದರು.
ಪಟ್ಟಣದ 12ನೇ ವಾರ್ಡ್ನ 2ನೇ ಮುಖ್ಯ ರಸ್ತೆಯಲ್ಲಿ ಪುರಸಭೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಖಾಸಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ಈ ವಿಚಾರವಾಗಿ ಕೆಲ ಸದಸ್ಯರು ನನ್ನ ಹೆಸರು ಪ್ರಸ್ತಾಪಿಸಿ ವಾಣಿಜ್ಯ ಮಳಿಗೆಯ ಮಾಲೀಕನಿಂದ 4 ಲಕ್ಷ ರೂ ಹಣವನ್ನು ಲಂಚದ ರೂಪವಾಗಿ ಪಡೆದಿದ್ದಾರೆ. ಬೇರೆಯವರು ಮಾಡುವ ಅಕ್ರಮ ವ್ಯವಹಾರಗಳಿಗೆ ನಮ್ಮ ಹೆಸರನ್ನುಬಳಸಿಕೊಳ್ಳುವುದು ಎಷ್ಟು ಸರಿ. ನಮ್ಮ ಗೌರವ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಈ ಸಂಬಂಧ ನಮ್ಮ ಬಳಿ ದಾಖಲೆ ಇವೆ. ಅಕ್ರಮವಾಗಿ ಜಾಗ ಒತ್ತುವರಿ ಮಾಡಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ನೆಲಸಮ ಮಾಡುವಂತೆ ಪುರಸಭೆ ಸದಸ್ಯ ಮಂಜುನಾಥ್ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರಲ್ಲಿ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ರಾಜೇಶ್ವರಿ ಆನಂದ್, ಪುರಸಭೆಗೆ ಸೇರಿದ ಸ್ವತ್ತು ಸಾರ್ವಜನಿಕರ ಆಸ್ತಿಯಾಗಿದೆ. ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿರುವವರಿಗೆ ನೋಟೀಸ್ ನೀಡುವ ಅಗತ್ಯವಿಲ್ಲ. ಕಟ್ಟಡವನ್ನು ನೆಲಸಮ ಮಾಡಲು ಕ್ರಮವಹಿಸಿ ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.ಅಧ್ಯಕ್ಷರ ಮಾತಿಗೆ ಸದಸ್ಯೆ ಡಾ.ಸ್ವಾತಿ ಪ್ರದೀಪ್, ಜ್ಯೋತಿ ಕೆಂಚಪ್ಪ ಸಹ ಧ್ವನಿಗೂಡಿಸಿದರು. ಪುರಸಭೆ ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವ ವಾಣಿಜ್ಯ ಮಳಿಗೆಯನ್ನು ನೆಲಸಮ ಮಾಡಲು ಕ್ರಮವಹಿಸಲಾಗುವುದು ಎಂದು ಮುಖ್ಯಾಧಿಕಾರಿ
ತಿಮ್ಮರಾಜು ಸಭೆಯ ಗಮನಕ್ಕೆ ತಂದರು.ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಗೀತಾ ಹಾಗೂ ಸದಸ್ಯರು ಹಾಜರಿದ್ದರು.