ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಸೊಸೈಟಿಯಲ್ಲಿ 50 ವರ್ಷಗಳ ಬಳಿಕ ರೈತರು ವಿಶ್ವಾಸವಿಟ್ಟು ಕಾಂಗ್ರೆಸ್‌ಗೆ ಅವಕಾಶ ನೀಡಿದ್ದು, ಇದರಲ್ಲಿ ಪಕ್ಷದ ಕಾರ್ಯಕರ್ತರ ಶ್ರಮವೂ ಇದೆ. ನೂತನ ನಿರ್ದೇಶಕರು ಯಾರ ನಂಬಿಕೆಗೂ ಧಕ್ಕೆಯಾಗದಂತೆ ರೈತ ಸ್ನೇಹಿಯಾಗಿ ಆಡಳಿತ ನಡೆಸಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸಲಹೆ ನೀಡಿದರು.ತಾಲೂಕಿನ ಶೇಷಗಿರಿಹಳ್ಳಿ ಬಳಿಯಿರುವ ಸನ್‌ವಿಂಗ್ ರೆಸಾರ್ಟ್‌ನಲ್ಲಿ ಶುಕ್ರವಾರ ಸಂಜೆ ಬಿಡದಿ ರೈತರ ವಿವಿದ್ದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತ ಗೆಲುವು ತಂದುಕೊಟ್ಟ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದರು. ಆದರೂ ತೀವ್ರ ಪೈಪೋಟಿ ನಡುವೆ 4 ನಿರ್ದೇಶಕರು ಆಯ್ಕೆಯಾಗಿದ್ದರು. ಆದರೀಗ 11 ಮಂದಿ ನಿರ್ದೇಶಕರು ಆಯ್ಕೆಯಾಗಲು ರೈತರಿಟ್ಟಿರುವ ವಿಶ್ವಾಸ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮ ಕಾರಣ. ಎಲ್ಲರು ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.ಜೆಡಿಎಸ್‌ನವರು ಬಿಡದಿ ಸೊಸೈಟಿಯನ್ನು ಬಿಡಿಸಿಸಿ ಬ್ಯಾಂಕ್‌ನ ವ್ಯಾಪ್ತಿಗೆ ಸೇರಿಸದೆ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದರು. ಅದನ್ನು ರೈತ ಮತದಾರರು ವಿಫಲಗೊಳಿಸಿದ್ದಾರೆ. ಈ ಚುನಾವಣೆ ಫಲಿತಾಂಶ ಬಿಡದಿ ಭಾಗದಲ್ಲಿ ಕಾಂಗ್ರೆಸ್‌ನ ಗೌರವ ಇಮ್ಮಡಿಗೊಳಿಸಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಯಾಗಲು ಶ್ರಮಿಸೋಣ ಎಂದು ಬಾಲಕೃಷ್ಣ ಹೇಳಿದರು.
ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ : ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಲ್.ಚಂದ್ರಶೇಖರ್ ಮಾತನಾಡಿ, ಬಿಡದಿ ಸೊಸೈಟಿಯನ್ನು ರೈತ ಸ್ನೇಹಿಯಾಗಿಸಲು ಉತ್ತಮ ಆಡಳಿತ ತರಬೇಕೆಂದು ಬಾಲಕೃಷ್ಣ ಅವರ ಮಾರ್ಗದರ್ಶನ ಹಾಗೂ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರ ಆಶೀರ್ವಾದದಲ್ಲಿ ನಡೆದ ಚುನಾವಣೆಯಲ್ಲಿ11 ನಿರ್ದೇಶಕರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು. ಈ ಚುನಾವಣೆಯಲ್ಲಿ ನಮ್ಮಲ್ಲಿರುವವರೇ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಿದರು. ಆದರೆ, ಅದ್ಯಾವ ಹುನ್ನಾರಗಳು ಸಫಲವಾಗಲಿಲ್ಲ. ಪಕ್ಷ ವಿರೋಧ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಬ್ಯಾಂಕ್‌ಗೆ ಸರಿಸಮಾನವಾಗಿ ಸಂಘವನ್ನು ಅಭಿವೃದ್ಧಿ ಪಡಿಸುವ ಮೂಲಕ ರೈತರ ನಂಬಿಕೆ ಉಳಿಸಿಕೊಂಡು ಕೆಲಸ ಮಾಡುವ ಸವಾಲು ಮುಂದಿದೆ ಎಂದರು.
ನಾನೆಂದೂ ಅಧಿಕಾರದ ದರ್ಪ ತೋರಿದವರನಲ್ಲ:
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು ಮಾತನಾಡಿ, ಚುನಾಯಿತರಾದ ಎಲ್ಲ ನಿರ್ದೇಶಕರು ರೈತರ ಪರವಾಗಿ ಕೆಲಸ ಮಾಡಿ, ಸಂಘವನ್ನು ಅಭಿವೃದ್ಧಿಯತ್ತ ತೆಗದುಕೊಂಡು ಹೋಗಬೇಕು. ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೊ ಅವರಿಗೆ ಮುಂದಿನ ದಿನಗಳಲ್ಲಿ ಮುಳುವಾಗುತ್ತದೆ. ನಾನೆಂದೂ ಅಧಿಕಾರದ ದರ್ಪ ತೋರಿದವರನಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ಕಾರ್ಯಕರ್ತರು ಒಗ್ಗಟ್ಟಾಗಿದ್ದರೆ ಯಾವ ಚುನಾವಣೆ ಬೇಕಾದರು ಗೆಲ್ಲಬಹುದು ಎಂಬುದಕ್ಕೆ ಬಿಡದಿ ಸೊಸೈಟಿ ಸಾಕ್ಷಿಯಾಗಿದೆ. ಚಕ್ರಭಾವಿ ಸೊಸೈಟಿ ಚುನಾವಣೆ ಬಳಿಕ ಬಿಡದಿ ಸೊಸೈಟಿ ಚುನಾವಣೆ ಗೆಲ್ಲುವುದಾಗಿ ಸವಾಲು ಹಾಕಿದ್ದ ಸ್ವಯಂ ಘೋಷಿತ ನಾಯಕರಿಗೆ ರೈತ ಮತದಾರರೇ ಉತ್ತರ ನೀಡಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್.ಮಂಜು ಮಾತನಾಡಿ, ಜೆಡಿಎಸ್ ತೆಕ್ಕೆಯಲ್ಲಿದ್ದ ಕೂಟಗಲ್ ಹೋಬಳಿಯ 7 ವಿಎಸ್‌ಎಸ್‌ಎನ್‌ಗಳು ಇಂದು ಕಾಂಗ್ರೆಸ್ ಪಾಲಾಗಿವೆ. ಅದರ ಮುಂದುವರೆದ ಭಾಗವಾಗಿ ಬಿಡದಿ ಸೊಸೈಟಿ ಸಹ ಕಾಂಗ್ರೆಸ್ ತೆಕ್ಕೆಗೆ ತರುವಲ್ಲಿ ಚುನಾವಣಾ ಚಾಣಾಕ್ಯ ಬಾಲಕೃಷ್ಣ ಅವರ ಪಾತ್ರ ಪ್ರಮುಖವಾಗಿದೆ. ಸೊಸೈಟಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿ ಸಾಲ ಮೇಳ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೇವೆ ಎಂದು ಹೇಳಿದರು.ಬಮೂಲ್ ನಿರ್ದೇಶಕ ಪಿ.ನಾಗರಾಜು, ಬಿಡದಿ ಬ್ಲಾಕ್ ಅಧ್ಯಕ್ಷ ಎ.ಬಿ.ಗಂಗಾಧರ್‌ಗೌಡ ಮಾತನಾಡಿದರು. ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎನ್.ನರಸಿಂಹಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಪ್ರಾಧಿಕಾರದ ನಿರ್ದೇಶಕ ರಮೇಶ್, ಮಹಿಳಾ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷೆ ಡಾ.ದೀಪಾ, ಜಿಪಂ ಮಾಜಿ ಸದಸ್ಯ ಪುಟ್ಟಯ್ಯ, ಪಿಎಲ್‌ಡಿ ಬ್ಯಾಂಕ್‌ನ ನರಸಿಂಹಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿ, ವಿ.ಅರ್.ಹೊಂಬೇಗೌಡ ಯುವ ಕಾಂಗ್ರೆಸ್ ಮುಖಂಡ ಪೃಥ್ವಿ ಬ್ಯಾಟಪ್ಪ, ಮುಖಂಡರಾದ ಎಚ್.ಎಸ್.ಯೋಗಾನಂದ, ಎಸ್.ಆರ್.ಎಸ್.ರಾಜಣ್ಣ, ರಮ್ಯಧನಂಜಯ್ಯ, ಹೊಸೂರುರಾಜಣ್ಣ, ಸಿದ್ದರಾಜು, ಶೇಷಗಿರಿಹಳ್ಳಿ ಶಿವಣ್ಣ, ಕುಮಾರ್, ಹೇಮಂತ್‌ಕುಮಾರ್, ನಂಜುಂಡಿ, ಸುಜ್ಞಾನಮೂರ್ತಿ, ಜಗದೀಶ್, ಬಿಡದಿ ಸೊಸೈಟಿ ನಿರ್ದೇಶಕರಾದ ವಿ.ಆರ್.ಮಹೇಶ್, ಜೀವನಬಾಬು, ಸಂತೋಷ್, ರಮೇಶ್, ದೊಡ್ಡರೇವಯ್ಯ, ಮಧುಕುಮಾರ್, ಸತ್ಯಮೂರ್ತಿ, ಕೆಂಗಲ್ ಹನುಮಂತಯ್ಯ, ಅನ್ನಪೂರ್ಣೇಶ್ವರಿ, ಬಾಲಕೃಷ್ಣ, ಶೋಭಾ, ಸೇರಿದಂತೆ ಪುರಸಭೆ ಸದಸ್ಯರು, ಮುಖಂಡರುಗಳು ವೇದಿಕೆಯಲ್ಲಿ ಇದ್ದರು.
ಬಿಡದಿ ಸೊಸೈಟಿ ಚುನಾವಣೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ವಹಿಸಿದ ಜವಬ್ದಾರಿಯನ್ನು ಮುಖಂಡರು ಸಮರ್ಥವಾಗಿ ನಿಭಾಯಿಸಿ, ಇಡೀ ಸಿಂಡಿಕೇಟನ್ನು ಗೆಲ್ಲಿಸುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅದಕ್ಕೆ ಕಾರಣರಾದ ಮುಖಂಡರು ಮತ್ತು ಎಲ್ಲ ಕಾರ್ಯಕರ್ತರು, ನಿರ್ದೇಶಕರನ್ನು ಅಭಿನಂದಿಸುತ್ತೇನೆ.ಬ್ಯಾಟಪ್ಪ, ಕೆಪಿಸಿಸಿ ಸದಸ್ಯರು.
ಬಿಡದಿ ಸೊಸೈಟಿ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು 11 ನಿರ್ದೇಶಕರನ್ನು ಆಯ್ಕೆ ಮಾಡಿ ನಮಗೆ ಸಂಘವನ್ನು ಮುನ್ನಡೆಸುವ ಜವಬ್ದಾರಿ ವಹಿಸಿದ್ದೀರಿ. ನಿಮ್ಮಗಳ ಸಹಕಾರ, ಮಾರ್ಗದರ್ಶನದಲ್ಲಿ ಎಲ್ಲ ನಿರ್ದೇಶಕರು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ರೈತ ಪರವಾದ ಕೆಲಸ ಮಾಡುತ್ತೇವೆ. ನಿಮ್ಮಗಳ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ.-ವಿ.ಆರ್.ಮಹೇಶ್, ನಿರ್ದೇಶಕರು, ಬಿಡದಿ ಸೊಸೈಟಿ