ಕನ್ನಡಪ್ರಭ ವಾರ್ತೆ ಹಳಿಯಾಳ
ನಶೆಮುಕ್ತ ಬದುಕು ವ್ಯಕ್ತಿಯ ಜೀವನವನ್ನು ಸುಂದರಗೊಳಿಸುವುದಲ್ಲದೇ, ಉತ್ತಮ ಸಂಸ್ಕಾರ, ಸದ್ಭಾವನೆ ಮತ್ತು ಸಾತ್ವಿಕ ವರ್ತನೆಯನ್ನು ಬೆಳೆಸುತ್ತದೆ ಎಂದು ಹಳಿಯಾಳ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಡಾ. ಬಿ.ಕೆ. ಪದ್ಮಕ್ಕ ಹೇಳಿದರು.ಪಟ್ಟಣದ ಶಿವಾನುಭೂತಿ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಹಳಿಯಾಳದ ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ನಶಾಮುಕ್ತ ಭಾರತ ಅಭಿಯಾನ ಹಾಗೂ ಮಿಷನ್ ಸ್ಪಂದನ ಅಡಿಯಲ್ಲಿ ವಿಕಸಿತ ಭಾರತದ ಒಂದು ಸಬಲ ಹೆಜ್ಜೆ-ದಾದಿ ಪ್ರಕಾಶ್ ಮಣಿಜಿಯವರ ಪುಣ್ಯಸ್ಮರಣೆಯ ನಿಮಿತ್ತ 10 ಕೋಟಿ ನಶಾಮುಕ್ತ ಪ್ರತಿಜ್ಞೆಗಳ ಮಹಾಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ವ್ಯಕ್ತಿಯ ವರ್ತನೆಯಲ್ಲಿ ಸಕಾರಾತ್ಮಕ ಪರಿವರ್ತನೆ ಉಂಟಾದಾಗ ಮಾತ್ರ ಜೀವನವು ಪಾವನವಾಗುತ್ತದೆ ಎಂದು ಹೇಳಿದರು.
ನಶಾಮುಕ್ತ ಭಾರತ ಅಭಿಯಾನದ ಪೋಸ್ಟರ್ ಅನಾವರಣಗೊಳಿಸಿ, ನಶೆಯಿಂದ ಮುಕ್ತ, ಆರೋಗ್ಯದಿಂದ ಯುಕ್ತ, ಸಂಸ್ಕಾರದಿಂದ ಸಮೃದ್ಧ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವ ಸಂಕಲ್ಪ ಕೈಗೊಳ್ಳಲಾಯಿತು.ಡಾ. ವಿದ್ಯಾರಣ್ಯ ಐತಾಳ, ಹಳಿಯಾಳ ಪಿಎಸ್‌ಐ ಕೃಷ್ಣಗೌಡ ಅರಕೇರಿ, ಹಳಿಯಾಳ ಹೆಸ್ಕಾಂ ಶಾಖಾಧಿಕಾರಿ ಗಣಪತಿ ಹಳಿಯಾಳಕರ ಮಾತನಾಡಿದರು.
ಹಿರಿಯ ಗಾಯಕ ಡಾ. ಚಂದ್ರಶೇಖರ ಓಶೀಮಠ ಭಾವಗೀತೆ ಹಾಡಿ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಮೆರಗು ನೀಡಿದರು. ದುರ್ಗಾ ನಾಟ್ಯ ಕಲಾಸಂಘದ ವಿದ್ಯಾರ್ಥಿಗಳು ಆಕರ್ಷಕ ಭರತನಾಟ್ಯ ಪ್ರದರ್ಶಿಸಿದರು.
ಉದ್ಯಮಿ ಪ್ರಕಾಶ ಹನುಮಶೇಟ್, ವಕೀಲ ಚಂದ್ರಶೇಖರ್ ನುಚ್ಛಂಬ್ಲಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು. ರಾಜಯೋಗಿನಿ ಬಿ.ಕೆ. ಲಕ್ಷ್ಮೀ ಅಕ್ಕ ಹಾಗೂ ಬೊಂಬೆಯಾಟ ತಜ್ಞ ಸಿದ್ಧಪ್ಪ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಕುಮಾರಿಯರ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಯುವಜನರು, ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿ 10 ಕೋಟಿ ನಶಾಮುಕ್ತ ಪ್ರತಿಜ್ಞೆಗಳ ಮಹಾ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.