ಯಲಬುರ್ಗಾ ಸಿದ್ದರಾಮೇಶ್ವರ ಮಠಕ್ಕೆ ಆಡಳಿತ ಸಮಿತಿ?

| Published : Sep 12 2024, 01:52 AM IST

ಸಾರಾಂಶ

ಪಟ್ಟಣದ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ವರ್ತನೆ ಖಂಡಿಸಿ ಮಂಗಳವಾರ ರಾತ್ರಿ ಶ್ರೀಮಠದಲ್ಲಿ ಭಕ್ತ ಸಮೂಹ ತುರ್ತು ಸಭೆ ನಡೆಸಿ, ಮಠದ ಆಡಳಿತ ನೋಡಿಕೊಳ್ಳಲು ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠ ಟ್ರಸ್ಟ್ ರಚಿಸಿ ಕೆಲ ನಿರ್ಣಯ ಕೈಗೊಂಡಿದ್ದು, ಟ್ರಸ್ಟ್‌ನ ನಿರ್ಣಯ ಒಪ್ಪದಿದ್ದರೆ ಪೀಠ ತ್ಯಾಗ ಮಾಡಬೇಕು ಎಂದೂ ಸಭೆಯಲ್ಲಿ ತಿಳಿಸಲಾಗಿದೆ.

ಸ್ವಾಮೀಜಿ ಅನುಪಸ್ಥಿತಿಯಲ್ಲಿ ಭಕ್ತರ ಸಭೆ ನಿರ್ಧಾರ

ಟ್ರಸ್ಚ್ ನಿರ್ಧಾರ ಒಪ್ಪದಿದ್ದರೆ ಪೀಠ ತ್ಯಜಿಸಲು ಸೂಚನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪಟ್ಟಣದ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ವರ್ತನೆ ಖಂಡಿಸಿ ಮಂಗಳವಾರ ರಾತ್ರಿ ಶ್ರೀಮಠದಲ್ಲಿ ಭಕ್ತ ಸಮೂಹ ತುರ್ತು ಸಭೆ ನಡೆಸಿ, ಮಠದ ಆಡಳಿತ ನೋಡಿಕೊಳ್ಳಲು ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠ ಟ್ರಸ್ಟ್ ರಚಿಸಿ ಕೆಲ ನಿರ್ಣಯ ಕೈಗೊಂಡಿದ್ದು, ಟ್ರಸ್ಟ್‌ನ ನಿರ್ಣಯ ಒಪ್ಪದಿದ್ದರೆ ಪೀಠ ತ್ಯಾಗ ಮಾಡಬೇಕು ಎಂದೂ ಸಭೆಯಲ್ಲಿ ತಿಳಿಸಲಾಗಿದೆ.

ಮಠದ ಒಳಗಿನ ಕೊಣೆಯಲ್ಲಿಯೇ ಇದ್ದ ಸಿದ್ದರಾಮೇಶ್ವರ ಸ್ವಾಮೀಜಿ ಸಭೆಗೂ ಬರಲಿಲ್ಲ, ಸಭೆ ನಡೆಸಿದವರ ಜೊತೆಗೂ ಮಾತನಾಡಲಿಲ್ಲ. ಅವರ ಅನುಪಸ್ಥಿತಿಯಲ್ಲಿಯೇ ಭಕ್ತರು ಸಭೆ ಸೇರಿ ಮಹತ್ವದ ನಿರ್ಣಯ ಕೈಗೊಂಡಿದ್ದು, ಸಂಸ್ಥಾನ ಹಿರೇಮಠದ ಇತಿಹಾಸದಲ್ಲಿಯೇ ದೊಡ್ಡ ವಿವಾದಕ್ಕೆ ನಾಂದಿ ಹಾಡಿದಂತೆ ಆಗಿದೆ.

ಸಭೆಯಲ್ಲಿ ಮಠದ ಸೇವಕನಾಗಿದ್ದ ಸಿದ್ದಯ್ಯ ಗಡ್ಡಿಮಠ ಅವರನ್ನು ತೆಗೆದುಹಾಕಿದ್ದನ್ನು ಪ್ರಶ್ನೆ ಮಾಡಲಾಯಿತು. ಏಕಾಏಕೀ ತೆಗೆದು ಹಾಕುವುದು ನ್ಯಾಯಸಮ್ಮತವಲ್ಲ. ಆದ್ದರಿಂದ ಗಡ್ಡಿಮಠ ಅವರನ್ನು ಪುನಃ ಸೇವೆಗೆ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ಸಂಸ್ಥೆಯಲ್ಲಿ ಆತನ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು, ಭಕ್ತರ ಕೋರಿಕೆಯಂತೆ ಟ್ರಸ್ಟ್ ರಚಿಸಿದ್ದು, ಇದರ ಆದೇಶದಂತೆ ಶ್ರೀಗಳು ಕಾರ್ಯ ನಿರ್ವಹಿಸಬೇಕು. ಟ್ರಸ್ಟ್‌ನ ನಿರ್ಣಯಗಳನ್ನು ಒಪ್ಪದಿದ್ದರೆ ಪೀಠ ತ್ಯಾಗ ಮಾಡಬೇಕು ಎಂದು ಒಂದು ವಾರದ ಗಡುವು ನೀಡಲಾಗಿದೆ.

ಮಠದ ಒಟ್ಟು ಸ್ಥಿರಾಸ್ತಿ, ಚರಾಸ್ತಿ ಹಾಗೂ ಭಕ್ತರು ದಾನದ ರೂಪದಲ್ಲಿ ದೇಣಿಗೆ ನೀಡಿದ ಬಂಗಾರ, ಬೆಳ್ಳಿ, ಹಣದ ಲೆಕ್ಕವನ್ನು ಟ್ರಸ್ಟ್‌ಗೆ ನೀಡಬೇಕು. ಇದುವರೆಗೂ ಲೆಕ್ಕ ನೀಡದೆ ಇರುವುದರಿಂದಲೇ ಸಮಸ್ಯೆಯಾಗಿದ್ದು, ಇನ್ನಾದರೂ ಲೆಕ್ಕ ನೀಡಿ ಎಂದು ಟ್ರಸ್ಟ್‌ ಸದಸ್ಯರು ತಾಕೀತು ಮಾಡಿದ್ದಾರೆ.

ಆದರೆ, ಇದ್ಯಾವುದನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ದರಾಮೇಶ್ವರ ಸ್ವಾಮೀಜಿಗಳು ಕೋಣೆಯಿಂದ ಹೊರಗೆ ಬರಲೇ ಇಲ್ಲ. ಪೊಲೀಸ್ ಬಿಗಿಬಂದೋಬಸ್ತ್ ನಲ್ಲಿಯೇ ಇದ್ದರು.

ಇದಲ್ಲದೆ ಸಹೋದರರ ಹೆಸರಿನಲ್ಲಿ ಪರಭಾರೆ ಮಾಡಿದ ಆಸ್ತಿಗಳನ್ನು ಶ್ರೀಮಠಕ್ಕೆ ವರ್ಗಾಯಿಸಬೇಕು. ಮಠದ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಗಳ ಸಂಬಂಧಿಗಳ ಹಸ್ತಕ್ಷೇಪ ಇರಬಾರದೆಂದು ಸಭೆಯಲ್ಲಿ ಖಡಕ್‌ ಎಚ್ಚರಿಕೆ ನೀಡಲಾಯಿತು.

ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ನಿರ್ಣಯ ಮಂಡಿಸಿದರು. ಬಳಿಕ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಮೂಲಕ ಭಕ್ತರ ನಿರ್ಣಯವನ್ನು ಶ್ರೀಗಳಿಗೆ ತಲುಪಿಸಲಾಯಿತು. ಭಕ್ತರು ಆಕ್ರೋಶಗೊಂಡ ಹಿನ್ನೆಲೆಯಲ್ಲಿ ಶ್ರೀಗಳ ರಕ್ಷಣೆಗಾಗಿ ಮಠಕ್ಕೆ ಪೊಲೀಸ್ ಇಲಾಖೆಯಿಂದ ಡಿಆರ್ ವಾಹನ ನಿಯೋಜನೆ ಮಾಡಲಾಗಿದೆ ಎಂದು ಪಿಎಸ್‌ಐ ವಿಜಯಪ್ರತಾಪ ತಿಳಿಸಿದರು.

ಟ್ರಸ್ಟ್ ರಚನೆ:

ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠ ಟ್ರಸ್ಟ್ ಕಮಿಟಿಗೆ ವೀರನಗೌಡ ಬನ್ನಪ್ಪಗೌಡ್ರ (ಅಧ್ಯಕ್ಷ), ಅಂದಯ್ಯ ಕಳ್ಳಿಮಠ (ಗೌರವಾಧ್ಯಕ್ಷ), ಶರಣಪ್ಪ ಗಾಂಜಿ, ಸಿದ್ದಪ್ಪ ದಂಡಿನ, ಶಿವಪ್ಪ ಶಾಸ್ತ್ರಿ, ಕುಬೇರಗೌಡ ಮಾಲಿಪಾಟೀಲ, ಶರಣಪ್ಪ ಅರಕೇರಿ (ಉಪಾಧ್ಯಕ್ಷರು), ದಾನನಗೌಡ ತೊಂಡಿಹಾಳ (ಪ್ರಧಾನ ಕಾರ್ಯದರ್ಶಿ), ಸುರೇಶಗೌಡ ಶಿವನಗೌಡ್ರ (ಉಪ ಪ್ರಧಾನ ಕಾರ್ಯದರ್ಶಿ), ಸಂಗಪ್ಪ ಕೊಪ್ಪಳ, ಮಲ್ಲಿಕಾರ್ಜುನ ಪೋ.ಪಾಟೀಲ (ಸಂಘಟನಾ ಕಾರ್ಯದರ್ಶಿ), ಬಸವರಾಜ ಅಧಿಕಾರಿ ವಿಜಯಕುಮಾರ ಕರಂಡಿ, ರುದ್ರಮುನಿ ಹಿರೇಕುರಬರ, ಕಳಕಪ್ಪ ಹೂಗಾರ (ಸಹ ಕಾರ್ಯದರ್ಶಿಗಳು), ಸಿದ್ದರಾಮೇಶ್ವರ ಬೇಲೇರಿ (ಖಜಾಂಚಿ), ಶರಣಪ್ಪ ಓಜನಹಳ್ಳಿ (ಸಹ ಖಜಾಂಚಿ), ಪ್ರಕಾಶ ಬೇಲೇರಿ, ಅಕ್ಕಮ್ಮ ಮಾಲಿಪಾಟೀಲ, ಪ್ರಭುರಾಜ ಕಲಬುರ್ಗಿ (ಕಾನೂನು ಸಲಹೆಗಾರರು) ಸೇರಿ ೨೦ಕ್ಕೂ ಹೆಚ್ಚು ಸದಸ್ಯರನ್ನು ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಶಿವನಗೌಡ ಬನ್ನಪ್ಪಗೌಡ್ರ, ಸಂಗಣ್ಣ ಟೆಂಗಿನಕಾಯಿ, ಅಮರಪ್ಪ ಕಲಬುರ್ಗಿ, ಫಕೀರಪ್ಪ ಉಪ್ಪಾರ, ಶರಣಪ್ಪ ಅರಕೇರಿ, ಕಲ್ಲನಗೌಡ ಓಜನಹಳ್ಳಿ, ಮಂಜು ಹಳ್ಳಿಕೇರಿ ಸೇರಿದಂತೆ ಮತ್ತಿತರರಿದ್ದರು.