ಕಾಂಗ್ರೆಸ್‌ ಒಳಜಗಳದಿಂದ ಆಡಳಿತ ಯಂತ್ರ ಕುಸಿತ: ಶೆಟ್ಟರ್‌

| Published : Nov 22 2025, 02:15 AM IST

ಸಾರಾಂಶ

ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ ಅವರಿಗೆ ಬಿಟ್ಟುಕೊಡಲು ಸಿಎಂ ಸಿದ್ದರಾಮಯ್ಯಗೆ ಸೂಚಿಸುವಂತೆ ಡಿಕೆಶಿ ಬಣ ದೆಹಲಿಯಲ್ಲಿ ಪಕ್ಷದ ಮುಖಂಡರ ಬಳಿ ಪಟ್ಟು ಹಿಡಿದಿದೆ. ಆದರೆ, ಯಾರಿಗೂ ಏನನ್ನೂ ಹೇಳದಂತಹ ಸ್ಥಿತಿಯಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಇದೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಾಂಗ್ರೆಸ್​ ಒಳಜಗಳದಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ. ಸದ್ಯದ ಸ್ಥಿತಿ ಕಾಂಗ್ರೆಸ್​ ಸರ್ಕಾರದ ಪತನಕ್ಕೂ ದಾರಿಯಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರ ಹಂಚಿಕೆ ವಿಷಯವಾಗಿ ಕಾಂಗ್ರೆಸ್​ನಲ್ಲಿ ಬಣ ರಾಜಕಾರಣ ತಾರಕಕ್ಕೆ ಹೋಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ ಬಣ ಈಗಾಗಲೇ ದೆಹಲಿಯಲ್ಲಿದೆ ಎಂದರು.

ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ ಅವರಿಗೆ ಬಿಟ್ಟುಕೊಡಲು ಸಿಎಂ ಸಿದ್ದರಾಮಯ್ಯಗೆ ಸೂಚಿಸುವಂತೆ ಡಿಕೆಶಿ ಬಣ ದೆಹಲಿಯಲ್ಲಿ ಪಕ್ಷದ ಮುಖಂಡರ ಬಳಿ ಪಟ್ಟು ಹಿಡಿದಿದೆ. ಆದರೆ, ಯಾರಿಗೂ ಏನನ್ನೂ ಹೇಳದಂತಹ ಸ್ಥಿತಿಯಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ರೈತರ ಹೋರಾಟಗಳು ತೀವ್ರಗೊಂಡಿವೆ. ಅನ್ನದಾತನ ಸಮಸ್ಯೆ ಪರಿಹರಿಸುವಲ್ಲಿಯೂ ರಾಜ್ಯ ಸರ್ಕಾರ ವಿಫಲಗೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅಧಿಕಾರಕ್ಕಾಗಿ ಕಚ್ಚಾಟ ತೀವ್ರಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದೆಡೆ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಡಿ.ಕೆ. ಶಿವಕುಮಾರ ಹತಾಶವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ರಾಜ್ಯದಲ್ಲಿಯೂ ಒಬ್ಬ ಏಕನಾಥ ಶಿಂಧೆ ಮತ್ತು ಅಜಿತ ಪವಾರ ಹುಟ್ಟಬಹುದು. ಮುಂದಿನ ದಿನಗಳಲ್ಲಿ ಸರ್ಕಾರ ಪತನವಾಗುತ್ತದೆ ಎಂದು ಶೆಟ್ಟರ್ ಭವಿಷ್ಯ ನುಡಿದರು.

ಬುರುಡೆ ಗ್ಯಾಂಗ್​ಗೆ ಸಿಎಂ ಕೃಪಾಕಟಾಕ್ಷ:

ಧರ್ಮಸ್ಥಳದ ಬಗ್ಗೆ ಸಲ್ಲದ ಆರೋಪ ಮಾಡಿದ್ದ ಬುರುಡೆ ಗ್ಯಾಂಗ್​ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಪಾಕಟಾಕ್ಷವಿದೆ ಎಂದು ಸಂಸದ ಜಗದೀಶ ಶೆಟ್ಟರ್​ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದ ವಿಚಾರದಲ್ಲಿ ಸಾಕಷ್ಟು ಅಪಪ್ರಚಾರ ನಡೆಯಿತು. ಸದ್ಯ ಎಸ್​ಐಟಿ ಆರೋಪ ಪಟ್ಟಿ ಸಲ್ಲಿಸಿದೆ. ಆದರೆ, ಯಾರನ್ನೂ ಬಂಧಿಸಿಲ್ಲ ಎಂದರು. ಸಮಾಜವಾದಿ, ಎಡಪಂಥೀಯ ಗ್ಯಾಂಗ್​ ಪ್ರಚೋದನೆಯಿಂದ ಎಸ್​ಐಟಿ ರಚನೆಯಾಯಿತು. ಯಾವುದೇ ಸಾಕ್ಷ್ಯ, ಪುರಾವೆ ಇಲ್ಲದೆಯೇ ಧರ್ಮಸ್ಥಳದ ಅಪಪ್ರಚಾರಕ್ಕೆಂದೆ ಎಸ್​ಐಟಿ ರಚಿಸಲಾಯಿತು ಎಂದು ದೂರಿದರು. ಆರೋಪ ಪಟ್ಟಿ ಸಲ್ಲಿಸಿರುವ ಎಸ್​ಐಟಿ ಕೆಲವರು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಆದರೆ, ಈ ವರೆಗೆ ಯಾರೊಬ್ಬರನ್ನೂ ಏಕೆ ಬಂಧಿಸಿಲ್ಲ? ಎಂದು ಶೆಟ್ಟರ್​ ಪ್ರಶ್ನಿಸಿದರು. ಬುರುಡೆ ಗ್ಯಾಂಗ್​ಗೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಆಶೀರ್ವಾದ ಇರುವ ಕಾರಣದಿಂದ ಇದುವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ. ಇನ್ನಾದರೂ ನಿಜವಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.