ಗ್ರಾಪಂನಲ್ಲೇ ಆಡಳಿತಾಧಿಕಾರಿ ಲಭ್ಯ

| Published : Jul 09 2025, 12:25 AM IST

ಸಾರಾಂಶ

ಸಾರ್ವಜನಿಕರು ತಮ್ಮ ವಿವಿಧ ಅರ್ಜಿಗಳನ್ನು ವಿಲೇವಾರಿ ಮಾಡಿಸಲು ಹಾಗೂ ಮಂಜೂರಾತಿಗಾಗಿ ತಾಲೂಕು ಕಚೇರಿ ಹಾಗೂ ನಾಡಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಇದನ್ನು ತಪ್ಪಿಸಲು ಗ್ರಾಪಂನಲ್ಲೇ ಆಡಳಿತಾಧಿಕಾರಿ ಲಭ್ಯವಿರುವಂತೆ ಸೂಚಿಸಲಾಗಿದೆ. ಇದಕ್ಕಾಗಿ ಕಚೇರಿಯಲ್ಲೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗ್ರಾಮಸ್ಥರು ಹಾಗೂ ಸಾರ್ವಜನಿಕರು ತಾಲೂಕು ಕಚೇರಿ ಇಲ್ಲವೆ ನಾಡಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಇನ್ನು ಮುಂದೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಆಯಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ನಿತ್ಯ ಲಭ್ಯವಾಗುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಅದರಂತೆ ಅಧಿಕಾರಿಗಳು ಆಯಾ ಪಂಚಾಯಿತಿ ಕೇಂದ್ರಗಳಲ್ಲಿಯೇ ಜನರ ಕೈಗೆ ಸಿಗುತ್ತಾರೆಂದು ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಹೇಳಿದರು.

ತಾಲೂಕಿನ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಥಾಪಿಸಿರುವ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿಯೇ ಕಾರ್ಯನಿರ್ವಹಿಸಲು ಕಂದಾಯ ಸಚಿವರು ಸೂಚನೆಯನ್ನು ನೀಡಿದ್ದಾರೆ ಎಂದರು.

ಗ್ರಾಪಂನಲ್ಲೇ ಪ್ರಮಾಣ ಪತ್ರ ಲಭ್ಯ

ಅದರಂತೆ ತಾಲೂಕಿನಲ್ಲಿ ಒಟ್ಟು ೩೩ ಕಂದಾಯ ವೃತ್ತಗಳಿದ್ದು ಸದ್ಯ ಒಟ್ಟು ೨೬ ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ಇಲಾಖೆಗೆ ಒಳಪಡುವಂತಹ ೩೩ ವಿವಿಧ ಪ್ರಮಾಣ ಪತ್ರಗಳು ಸೇರಿದಂತೆ ಇತರೆ ಹಲವು ಪ್ರಮುಖ ಪ್ರಮಾಣ ಪತ್ರಗಳಿಗೆ ಸಹಿ ಮಾಡಿ ಮುಂದಿನ ಹಂತದ ಅಧಿಕಾರಿಗಳಿಗೆ ಮಂಜೂರಾತಿಗಾಗಿ ರವಾನೆ ಮಾಡುತ್ತಾರೆ. ಸಾರ್ವಜನಿಕರು ತಮ್ಮ ವಿವಿಧ ಅರ್ಜಿಗಳನ್ನು ವಿಲೇವಾರಿ ಮಾಡಿಸಲು ಹಾಗೂ ಮಂಜೂರಾತಿಗಾಗಿ ತಾಲೂಕು ಕಚೇರಿ ಹಾಗೂ ನಾಡಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಇದನ್ನು ತಪ್ಪಿಸಲು ಗ್ರಾಪಂನಲ್ಲೇ ಆಡಳಿತಾಧಿಕಾರಿ ಲಭ್ಯವಿರುವಂತೆ ಸೂಚಿಸಲಾಗಿದೆ ಎಂದರು.ಗ್ರಾಪಂನಲ್ಲೇ ಕಾರ್ಯನಿರ್ವಹಣೆ

ಅದಕ್ಕಾಗಿ ಕಂದಾಯ ವೃತದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಆಯಾ ಪಂಚಾಯಿತಿ ಕೇಂದ್ರಗಳಲ್ಲಿಯೇ ಕಾರ್ಯ ನಿರ್ವಹಿಸಲು ಸೂಚನೆಯನ್ನು ನೀಡಿದ್ದಾರೆ. ಅದಕ್ಕಾಗಿ ಸಿಬ್ಬಂದಿಗಳು ಪಂಚಾಯಿತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಇರುವಂತಹ ಪೀಠೋಪಕರಣಗಳು ಹಾಗೂ ಅಗತ್ಯವಿರುವ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸಲು ಪಂಚಾಯಿತಿ ಅಧಿಕಾರಿಗಳಿಗೆ ಆದೇಶವನ್ನು ಸಹ ರವಾನಿಸಿದ್ದಾರೆಂದರು.

ಈ ವೇಳೆ ಪಿಡಿಒ ಭಾಸ್ಕರ್, ರಾಜಸ್ವ ನಿರೀಕ್ಷಕ ಅಜಯ್, ಗ್ರಾಮ ಆಡಳಿತ ಅಧಿಕಾರಿ ವಿನಯ್ ಸೇರಿದಂತೆ ಇತರರು ಹಾಜರಿದ್ದರು.