ಸಾರಾಂಶ
(ಸ್ವಾಯತ್ತ ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಅನುಮೋದಿಸಿದ್ದು, ಪರಿಗಣಿತ ವಿಶ್ವವಿದ್ಯಾನಿಲಯದ ಸ್ಥಾನಮಾನ ನೀಡಿದೆ ಎಂದು ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಜೆ. ಪಿಂಟೋ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ 145 ವರ್ಷ ಪುರಾತನ ಸಂತ ಅಲೋಶಿಯಸ್ ಕಾಲೇಜು ಇನ್ನು ಡೀಮ್ಡ್ ವಿಶ್ವವಿದ್ಯಾಲಯವಾಗಿ ಕೇಂದ್ರದಿಂದ ಅಂಗೀಕಾರಗೊಂಡಿದೆ.ನಗರದ ಪ್ರಸಿದ್ಧ ಸಂತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಅನುಮೋದಿಸಿದ್ದು, ಪರಿಗಣಿತ ವಿಶ್ವವಿದ್ಯಾನಿಲಯದ ಸ್ಥಾನಮಾನ ನೀಡಿದೆ ಎಂದು ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಜೆ. ಪಿಂಟೋ ತಿಳಿಸಿದ್ದಾರೆ.
ಕಾಲೇಜಿನ ಸಾನ್ನಿಧ್ಯ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿದರು.ಈ ಸ್ಥಾನಮಾನದೊಂದಿಗೆ ಸಂಸ್ಥೆಯು ಇನ್ನು ಮುಂದೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಎಂದು ಕರೆಯಲ್ಪಡುತ್ತದೆ. ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಸೇವೆ ಸಲ್ಲಿಸಬೇಕು ಎಂಬ ಬಹುದಿನಗಳಿಂದ ಅವಕಾಶದ ನಿರೀಕ್ಷೆಯಲ್ಲಿದ್ದ ಕಾಲೇಜಿನ ಆಡಳಿತ ಮಂಡಳಿಗೆ ಈ ಸ್ಥಾನಮಾನ ವಿಶೇಷ ಸಂತಸವನ್ನು ತಂದಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ಯುಜಿಸಿ ಮತ್ತು ಶಿಕ್ಷಣ ಸಚಿವಾಲಯ, ಕಾಲೇಜಿನ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ, ಪಠ್ಯಕ್ರಮ ವಿನ್ಯಾಸ, ಸಂಶೋಧನೆ ಮತ್ತು ಆವಿಷ್ಕಾರ, ಪದವಿ ಫಲಿತಾಂಶಗಳು, ವಿದ್ಯಾರ್ಥಿಗಳ ಸಾಧನೆಯ ಮಟ್ಟಗಳು, ನೇಮಕಾತಿ, ಸಂಸ್ಥೆಯ ಕನಸು, ಧೈಯ ಮತ್ತು ಸಮಾಜದ ಮೇಲೆ ಇವುಗಳು ಬೀರಿದ ಪರಿಣಾಮವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಈ ಸ್ಥಾನಮಾನ ನೀಡಿದೆ ಎಂದರು.ನಾಲ್ಕು ಹಂತಗಳಲ್ಲೂ ಉನ್ನತ ದರ್ಜೆ: 1880 ರಲ್ಲಿ ಜೆಸ್ಯೂಚ್ ಪಿತಾಮಹರಿಂದ ಸ್ಥಾಪಿತವಾದ ಸಂತ ಅಲೋಶಿಯಸ್ ಕಾಲೇಜು ಈ ಪ್ರದೇಶದ ಯುವಕರಲ್ಲಿ ಬದ್ಧತೆ, ಸಾಮರ್ಥ್ಯ, ಸಹಾನುಭೂತಿ ಮತ್ತು ಆತ್ಮಸಾಕ್ಷಿಯನ್ನು ಹೊಂದಿರುವ ವ್ಯಕ್ತಿಗಳನ್ನಾಗಿ ರೂಪಿಸಿದೆ. ಜೊತೆಗೆ ಈ ಸಂಸ್ಥೆ ಹಲವಾರು ವಿಶಿಷ್ಠ ಸಾಧನೆಗಳನ್ನು ಹೊಂದಿರುವ ಈ ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯ ರಾಷ್ಟ್ರೀಯ ಮತ್ತು ಜಾಗತಿಕ ಸ್ಥಾನಮಾನವನ್ನು ಪರಿಗಣಿಸಿ 2007ರಲ್ಲಿ ಅದಕ್ಕೆ ಸ್ವಾಯತ್ತತೆಯ ಸ್ಥಾನಮಾನ ನೀಡಲಾಯಿತು. ಇದಲ್ಲದೆ, ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ನ್ಯಾಕ್ ಮಾನ್ಯತೆಗಳ ಎಲ್ಲ ನಾಲ್ಕು ಹಂತಗಳ ಮೌಲ್ಯಮಾಪನ ಕ್ರಮದಲ್ಲಿ ಉನ್ನತ ದರ್ಜೆಯ ಶ್ರೇಯಾಂಕವನ್ನು ನಿರಂತರವಾಗಿ ಪಡೆದುಕೊಂಡಿದೆ ಎಂದು ಅವರು ಹೇಳಿದರು. ರಿಜಿಸ್ಟ್ರಾರ್ ಆಲ್ವಿನ್ ಡೇಸಾ ಇದ್ದರು.ಜೂನ್ ಶೈಕ್ಷಣಿಕ ವರ್ಷದಿಂದ ಪ್ರವೇಶ, ಎನ್‌ಇಪಿ ಪಠ್ಯ: ಕಾಲೇಜಿಗೆ ವಿಶ್ವವಿದ್ಯಾನಿಲಯದ ಸ್ಥಾನಮಾನ ಸ್ವಲ್ಪ ವಿಳಂಬವಾದರೂ ಸೂಕ್ತ ಸಮಯದಲ್ಲಿ ದೊರಕಿರುವ ಸಂತಸವಿದೆ. ಜ. 19ರಂದು ವಿಶ್ವವಿದ್ಯಾನಿಲಯ ಸ್ಥಾನಮಾನದ ಘೋಷಣೆಯಾಗಿದೆ. ಯುಜಿಸಿಯ ಮಾನದಂಡಗಳೊಂದಿಗೆ ವಿಶ್ವವಿದ್ಯಾನಿಲಯಕ್ಕಾಗಿನ ಅಧ್ಯಯನ ಮಂಡಳಿ, ಎಕ್ಸಿಕ್ಯೂಟಿವ್ ಕೌನ್ಸಿಲ್‌ಗಳ ರಚನೆ ಪ್ರಕ್ರಿಯೆ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಬಳಿಕ ಮುಂದಿನ ಜೂನ್‌ನಲ್ಲಿ ಹೊಸ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದ ಪ್ರವೇಶಾತಿ ಆರಂಭಗೊಳ್ಳಲಿದೆ. ಯುಜಿಸಿ ನಿಯಮಾವಳಿಯಂತೆ ಎನ್‌ಇಪಿ(ರಾಷ್ಟ್ರೀಯ ಶಿಕ್ಷಣ ನೀತಿ) ಸಿಲೆಬಸ್ ಇರಲಿದೆ ಎಂದು ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ತಿಳಿಸಿದರು.