ಸಾರಾಂಶ
ಪರೀಕ್ಷೆಯಲ್ಲಿ ಭಯ ಹೋಗಲಾಡಿಸುವುದು ಹೇಗೆ? ಕಾರ್ಯಾಗಾರದಲ್ಲಿ ಪ್ರಾಧ್ಯಾಪಕ ಡಾ. ಮಹೇಶ ದೇಸಾಯಿ ಉಪನ್ಯಾಸ ನೀಡಿದರು.
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಜೀವನದ ಪ್ರಮುಖ ಘಟ್ಟ. ಈ ವಯಸ್ಸಿನಲ್ಲಿ ಮಕ್ಕಳಿಗೆ ಹಾಕುವ ಬುನಾದಿ ಜೀವನದುದ್ದಕ್ಕೂ ಉಳಿದುಕೊಳ್ಳಲಿದೆ. ಹಾಗಾಗಿ, ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ಶ್ರಮವಹಿಸಿ ಅಭ್ಯಸಿಸಿದರೆ ಜೀವನದಲ್ಲಿ ಸಾಧನೆಯ ಶಿಖರ ಏರಲು ಸಾಧ್ಯ ಎಂದು ಕೆಎಂಸಿಆರ್‌ಐನ ಮಾನಸಿಕ ಹಾಗೂ ನರರೋಗ ವಿಭಾಗದ ಪ್ರಾಧ್ಯಾಪಕ ಡಾ. ಮಹೇಶ ದೇಸಾಯಿ ಹೇಳಿದರು.
"ಪರೀಕ್ಷೆಯಲ್ಲಿ ಭಯ ಹೋಗಲಾಡಿಸುವುದು ಹೇಗೆ? " ಕುರಿತು ಉಪನ್ಯಾಸ ನೀಡಿದ ಅವರು, ಯಾವುದೇ ಒಂದು ವಿದ್ಯಾರ್ಥಿ ಸಾಧನೆ ಮಾಡಲಿ ಅಥವಾ ವೈಫಲ್ಯತೆ ಕಾಣಲಿ ಅದಕ್ಕೆ ಪಾಲಕರು, ಶಿಕ್ಷಕರು, ಸಮಾಜ, ಸರ್ಕಾರ, ಶಿಕ್ಷಣ ಇಲಾಖೆ, ಮನೋರೋಗ ತಜ್ಞರ ಪಾತ್ರವೂ ಪ್ರಮುಖವಾಗಿದೆ. ಹಾಗಾಗಿ ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ನ್ಯೂನ್ಯತೆ ಸರಿಪಡಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸಲು ಮನೋರೋಗ ತಜ್ಞರ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.ಮಕ್ಕಳಿಗೆ ಪರೀಕ್ಷೆಯ ಭಯ ಇದ್ದೇ ಇರುತ್ತದೆ. ಪಾಲಕರು ಎಂದಿಗೂ ತಮ್ಮ ಮಕ್ಕಳಲ್ಲಿ ತಾರತಮ್ಯ, ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಇಂತಹ ಅನಾರೋಗ್ಯಕರ ಸ್ಪರ್ಧೆ, ಒತ್ತಡಗಳು ಅವರ ಕಲಿಕೆಯ ಹಿನ್ನೆಡೆಗೆ ಕಾರಣವಾಗಬಹುದು. ಇಂತಹ ಭಯ ಹೋಗಲಾಡಿಸಲು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ಈ ಕಾರ್ಯಾಗಾರ ಮಕ್ಕಳಲ್ಲಿನ ಭಯ ಹೋಗಲಾಡಿಸಿ ಪರೀಕ್ಷೆ ಎದುರಿಸಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ಪಾಲಕರು ಹಾಗೂ ಶಿಕ್ಷಕರಿಗೂ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.