ಸಾರಾಂಶ
ರೋಣ: ತಾಲೂಕಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕಾಗಿ ಪ್ರತಿಯೊಂದು ಇಲಾಖೆ ಅಧಿಕಾರಿಗಳು ತಲಾ ಎರಡು ಪ್ರೌಢ ಶಾಲೆಗಳನ್ನು ದತ್ತು ಪಡೆದು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಮಹೇಶ ಪೋತದಾರ ಹೇಳಿದರು.
ಅವರು ಮಂಗಳವಾರ ತಾಪಂ ಸಭಾಭವನದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿದ್ದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಕುರಿತು ಚರ್ಚಿಸಿ ಮಾತನಾಡಿದರು.ನಾನು ಸಹ ಮೊದಲು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದರಿಂದ ನನಗೆ ಶಿಕ್ಷಣ ಕ್ಷೇತ್ರದ ಮಹತ್ವ ಗೊತ್ತಿದೆ. ದೇಶದ ಪ್ರಗತಿ ಮತ್ತು ಮಕ್ಕಳ ಭವಿಷ್ಯದ ಜೀವನದ ಉಜ್ವಲತೆಗೆ ಶಿಕ್ಷಣ ಸಹಕಾರಿಯಾಗಿದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಈ ಹಿಂದೆ ತಾಲೂಕಿನಲ್ಲಿನ ಫಲಿತಾಂಶ ಗಮನದಲ್ಲಿಟ್ಟು ಇದಕ್ಕಿಂತಲೂ ಹೆಚ್ಚು ಫಲಿತಾಂಶ ಬರುವಂತಾಗಬೇಕು. ಈ ನಿಟ್ಟಿನಲ್ಲಿ ನಾನು ಸಹ ರೋಣ ತಾಲೂಕಿನಲ್ಲಿ 2 ಶಾಲೆ ದತ್ತು ಪಡೆದು ಫಲಿತಾಂಶ ಹೆಚ್ಚಳಕ್ಕೆ ಯೋಜನೆ ರೂಪಿಸುವುದರ ಜತೆಗೆ ಪ್ರಾಮಾಣಿಕವಾಗಿ ಪರಿಶ್ರಮಿಸುತ್ತೇನೆ. ಅದರಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಸಹ ತಲಾ 2 ಶಾಲೆ ದತ್ತು ಪಡೆದು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ ಶಿಕ್ಷಣ ಇಲಾಖೆಗೆ ಕೊಡುಗೆ ನೀಡಬೇಕು ಎಂದರು.
ಸಭೆಗೆ ತಡವಾಗಿ ಬಂದಿದ್ದಕ್ಕೆ ಬೇಸರ: ಸಭೆ ಬೆಳಗ್ಗೆ 11 ಗಂಟೆಗೆ ನಿಗದಿಯಾದರೂ ಬಹುತೇಕ ಅಧಿಕಾರಿಗಳು 12.30 ಗಂಟೆಯಾದರೂ ಬಾರದಿದ್ದರಿಂದ ಸಭೆಯೂ ನಿಗದಿತ ಸಮಯಕ್ಕಿಂತ ಒಂದುವರೆ ತಾಸು ತಡವಾಗಿ ಪ್ರಾರಂಭವಾಯಿತು. ಅಲ್ಲದೇ ಕೆಲ ಅಧಿಕಾರಿಗಳು ಸಭೆಗೆ ಗೈರಾಗಿದ್ದರು, ಕೆಲ ಅಧಿಕಾರಿಗಳು ತಮ್ಮ ಕಚೇರಿಯ ಸಹ ಸಿಬ್ಬಂದಿಯನ್ನು ಕಳುಹಿಸಿದ್ದರು. ಇದನ್ನು ಗಮನಿಸಿದ ತಾಪಂ ಆಡಳಿತಾಧಿಕಾರಿ ಮಹೇಶ ಪೋತದಾರ ತೀವ್ರ ಬೇಸರ ವ್ಯಕ್ತಪಡಿಸಿ ಮುಂದಿನ ಸಭೆಗೆ ಈ ರೀತಿಯಾಗದಂತೆ ಕನಿಷ್ಠ ಪಕ್ಷ ಸಭೆಯ ಶಿಷ್ಟಾಚಾರ ಪಾಲಿಸುವಂತೆ ತಾಕೀತು ಮಾಡಿದರು.ಗ್ರಾಮೀಣ ಭಾಗಕ್ಕೆ ದಿನದ 24 ತಾಸು ನೀರು ಪೂರೈಕೆ ವಿದ್ಯುತ್ ವ್ಯತ್ಯಯದಿಂದಾಗಿ ತೀವ್ರ ಸಮಸ್ಯೆಯಾಗುತ್ತಿದೆ. ಸಮರ್ಪಕ ವಿದ್ಯುತ ಒದಗಿಸಿದ್ದರೆ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬಹುದು ಎಂದು ಜಿಪಂ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಎಇಇ ಸುರೇಶ ನರ್ಲೆಕರ ಹೇಳಿದರು. ಈ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದು ಎಂದು ಆಡಳಿತಾಧಿಕಾರಿ ಮಹೇಶ ಪೋತದಾರ ತಿಳಿಸಿದರು.
ಸಿಡಿಪಿಒ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ವೇತನ ಪಾವತಿಯಾಗಿಲ್ಲ ಯಾಕೆ ? ಶೀಘ್ರವೇ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.ಬಿಸಿಎಂ, ಅಕ್ಷರ ದಾಸೋಹ, ನಿರ್ಮಿತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ, ತಾಪಂ, ಹೆಸ್ಕಾಂ, ಕೃಷಿ ಇಲಾಖೆ, ನೀರಾವರಿ ಇಲಾಖೆ, ರೇಷ್ಮೆ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಿದರು.
ಸಭೆಯಲ್ಲಿ ತಾಒಂ ಇಒ ಮಂಜುಳಾ ಹಕಾರಿ, ತಾಪಂ ಯೋಜನಾಧಿಕಾರಿ ಸಿ.ಎಸ್. ನೀಲಗುಂದ ಉಪಸ್ಥಿತರಿದ್ದರು.