ಸಾರಾಂಶ
ಶಿಕಾರಿಪುರ: ಬೆಳೆಯ ಉತ್ತಮ ಇಳುವರಿಗೆ ಹನಿ ನೀರಾವರಿ ವ್ಯವಸ್ಥೆ ಅತ್ಯಂತ ಉಪಯುಕ್ತವಾಗಿದ್ದು, ನೀರಿನ ಅನಾವಶ್ಯಕ ಪೋಲು ತಡೆಗಟ್ಟಿ ಸಸಿಗಳ ಸಮರ್ಪಕ ಬೆಳವಣಿಗೆಗೆ ರೈತ ಸಮುದಾಯ ಹನಿ ನೀರಾವರಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಇರುವಕ್ಕಿಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಕೃಷಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಬಸಮ್ಮ ತಿಳಿಸಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಚುರ್ಚುಗುಂಡಿ ಗ್ರಾಮದ ಬಯಲು ರಂಗಮಂದಿರದಲ್ಲಿ ಹನಿ ನೀರಾವರಿ ಮಹತ್ವ ಮತ್ತು ನಿರ್ವಹಣೆ ಕುರಿತು ನಡೆದ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಬೆಳೆಯ ಉತ್ತಮ ಬೆಳವಣಿಗೆಯಲ್ಲಿ ನೀರು ಅತ್ಯಂತ ಪ್ರಮುಖವಾಗಿದ್ದು, ಸಕಾಲದಲ್ಲಿ ನೀರನ್ನು ಭೂಮಿಗೆ ಒದಗಿಸಿದಲ್ಲಿ ಮಾತ್ರ ಅತ್ಯುತ್ತಮ ಇಳುವರಿ ಮೂಲಕ ರೈತ ಆರ್ಥಿಕವಾಗಿ ಸದೃಢನಾಗಲು ಸಾಧ್ಯ. ಈ ದಿಸೆಯಲ್ಲಿ ಹನಿ ನೀರಾವರಿ ವ್ಯವಸ್ಥೆ ಅತ್ಯಂತ ಸೂಕ್ತ ಕ್ರಮವಾಗಿದೆ ಎಂದು ತಿಳಿಸಿ, ಹನಿ ನೀರಾವರಿ ವ್ಯವಸ್ಥೆಯ ರಚನೆ, ಕಾರ್ಯವಿಧಾನ ಮತ್ತು ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಹನಿ ನೀರಾವರಿಯಲ್ಲಿ ಪಿ.ಸಿ. ಪಂಪುಗಳು ಮತ್ತು ಫಿಲ್ಟರ್‌ಗಳ ಪಾತ್ರವನ್ನು ವಿವರಿಸಿ ಅವುಗಳ ಸರಿಯಾದ ನಿರ್ವಹಣೆ ಮೂಲಕ ನೀರಿನ ಉಳಿತಾಯ ಮತ್ತು ಸಸ್ಯಗಳ ಸಮರ್ಪಕ ಬೆಳವಣಿಗೆಯು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ರೈತ ಸಮುದಾಯ ಹನಿ ನೀರಾವರಿ ಪದ್ಧತಿ ಬಳಸಿಕೊಂಡಲ್ಲಿ ಬೆಳೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹಾಗೂ ಪೋಷಕಾಂಶಗಳನ್ನು ಒದಗಿಸಬಹುದು ಇದರಿಂದ ಉತ್ಪಾದನೆ ಹೆಚ್ಚುವುದರ ಜೊತೆಗೆ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ತಿಳಿಸಿ, ಸರ್ಕಾರ ಹನಿ ನೀರಾವರಿ ಘಟಕಗಳಿಗೆ ಸಬ್ಸಿಡಿ ನೀಡುತ್ತಿದ್ದು ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು. ಗುಂಪು ಚರ್ಚೆಯಲ್ಲಿ ಸ್ಥಳೀಯ ರೈತರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಅನುಭವಗಳು ಹಾಗೂ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರ ಪಡೆದುಕೊಂಡರು. ಈ ಸಂದರ್ಭದಲ್ಲಿ ಹನಿ ನೀರಾವರಿ ವ್ಯವಸ್ಥೆಯ ನಿರ್ವಹಣೆ, ಶುದ್ಧೀಕರಣ ಹಾಗೂ ಫಿಲ್ಟರ್ ತಪಾಸಣೆ ಕುರಿತು ಪ್ರಾಯೋಗಿಕ ಸಲಹೆಗಳನ್ನು ನೀಡಲಾಯಿತು.ಗ್ರಾಮಸ್ಥರಾದ ಭರತ್, ಸೂರ್ಯಕಾಂತ್, ವೀರಭದ್ರಪ್ಪ, ಸತೀಶ್, ಷಣ್ಮುಖಪ್ಪ, ಸಚಿನ್, ನಂದೀಶ್ ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))