ಸಾರಾಂಶ
ಹಿರೇಕೆರೂರು: ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯ ಸೇವಾ ಮನೋಭಾವನೆ ಹಾಗೂ ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಪೊಲೀಸ್ ಮೈದಾನದಲ್ಲಿ ನಿರ್ಮಾಣಗೊಂಡ ಶ್ರೀ ವಿಘ್ನೇಶ್ವರ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಇಂದು ಸಮಾಜದಲ್ಲಿ ಮನುಷ್ಯರಲ್ಲಿ ಮಾನವೀಯ ಗುಣಗಳು ಕಾಣೆಯಾಗುತ್ತಿವೆ. ಆಚಾರ ವಿಚಾರಗಳ ಬಗ್ಗೆ ಹಾಗೂ ಮಾನವೀಯ ಗುಣಗಳ ಬಗ್ಗೆ ಪ್ರತಿಯೊಬ್ಬರೂ ಅರಿತು ನಡೆಯಬೇಕಿದೆ ಎಂದು ಹೇಳಿದರು.ಸೇವಾ ಮನೋಭಾವನೆ ಹೊಂದಿದ ವ್ಯಕ್ತಿ ಸೇವೆಯಲ್ಲಿ ತೊಡಗಿಕೊಂಡರೆ ಜೀವನ ಸಾರ್ಥಕವಾದಂತೆ. ಅಂಥವರು ಜನಮಾನಸದಲ್ಲಿ ನೆಲೆಸಿರುತ್ತಾರೆ. ಸೇವೆಯಿಂದ ಏನನ್ನಾದರೂ ಸಾಧಿಸಬಹುದು. ಪ್ರತಿಯೊಬ್ಬರೂ ಸೇವಾ ಮನೋಭಾವನೆ ರೂಢಿಸಿಕೊಂಡರೆ ಜೀವನದಲ್ಲಿ ಶಾಂತಿ, ನೆಮ್ಮದಿ ಹೊಂದಬಹುದು. ಇಲ್ಲ ಎಂದರೆ ಹತಾಶೆ ಮನೋಭಾವ ಮೂಡುತ್ತದೆ. ಶ್ರದ್ಧೆ ಇದ್ದರೆ ಜೀವನದಲ್ಲಿ ಬದ್ಧತೆ ಬರುತ್ತದೆ. ದಾನ ಮಾಡುವುದು ಒಂದು ಸೇವೆ. ಅದರಲ್ಲೂ ಧನ, ದಾನಕ್ಕಿಂತ ತನುವಿನ ದಾನ ಶ್ರೇಷ್ಠ. ಎಲ್ಲರ ಜೀವನದಲ್ಲಿ ಧರ್ಮ ಹಾಸು ಹೊಕ್ಕಾಗಿದೆ. ಅದರ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ಧರ್ಮವನ್ನು ನಾವು ರಕ್ಷಿಸಿದಲ್ಲಿ ಧರ್ಮ ನಮ್ಮನ್ನು ಕಾಯುತ್ತದೆ. ಒಳ್ಳೆಯ ಮೌಲ್ಯಗಳನ್ನು ಜನಸಾಮಾನ್ಯರಲ್ಲಿ ಮೂಡಿಸುವಲ್ಲಿ ದೇವಸ್ಥಾನಗಳ ಪಾತ್ರ ಹೆಚ್ಚು. ಧರ್ಮದ ಸಂಸ್ಕಾರ ಮತ್ತು ಸಂರಕ್ಷಣೆ ಆಗಬೇಕು ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಮಠ, ಮಂದಿರಗಳು ಸಾಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯ ತಾಣಗಳಾಗಿವೆ. ನಾವೆಲ್ಲರೂ ಧಾರ್ಮಿಕ ಅಂಶಗಳನ್ನು ಜೀವನದ ಅವಿಭಾಜ್ಯ ಅಂಶಗಳನ್ನಾಗಿ ಅಳವಡಿಸಿಕೊಳ್ಳಬೇಕು ಎಂದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಸಮಾಜದಲ್ಲಿನ ದ್ವೇಷ ಅಳಿಸಿ ಸಾಮರಸ್ಯ ತುಂಬುವ ಕೆಲಸ ಆಗಬೇಕಿದೆ. ಸೇವಾ ಮನೋಭಾವನೆ ರೂಢಿಸಿಕೊಂಡು ಕೆಲಸ ಮಾಡಿದರೆ ಜೀವನದಲ್ಲಿ ದೈವತ್ವ ಮೂಡುತ್ತದೆ ಎಂದರು.
ವಿಜಯಪ್ಪ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚೇತಕ ಡಿ.ಎಂ. ಸಾಲಿ, ಎಸ್.ಎಸ್. ಪಾಟೀಲ, ಪಪಂ ಅಧ್ಯಕ್ಷೆ ಸುಧಾ ಚಿಂದಿ, ರಾಮನಗರ ಎಸ್‌ಪಿ ಟಿ.ವಿ. ಸುರೇಶ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎಲ್.ವೈ. ಶಿರಕೋಳ, ಡಿವೈಎಸ್‌ಪಿ ಜೆ. ಲೋಕೇಶ, ಸಿಪಿಐ ಬಸವರಾಜ ಪಿ.ಎಸ್.. ಶಿಕಾರಿಪುರ ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಐ ನೀಲಪ್ಪ ನರನಾಲ, ಜಿ. ಶಿವನಗೌಡ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಲೋಕಪ್ಪ ಸಂಕೋಳ್ಳಿ, ಸತೀಶ ನಾಡಿಗೇರ, ಮಹೇಂದ್ರ ಬಡಳ್ಳಿ, ಗುರುಶಾಂತಪ್ಪ ಎತ್ತಿನಹಳ್ಳಿ, ಕಂಠಾಧರ ಅಂಗಡಿ, ರುದ್ರಮುನಿ ಹುಲ್ಮನಿ, ದುರುಗಪ್ಪ ನೀರಲಗಿ, ಬಸವರಾಜ ಚಿಂದಿ, ರುದ್ರಪ್ಪ ಶೆಟ್ಟರ, ಗುರುಮೂರ್ತಿ ನಾಡಿಗೇರ, ಯುವರಾಜ ಪಾಳೇದ, ಶ್ರೀನಿವಾಸ ಶಿರಗಂಬಿ, ರಾಮು ಮುರ್ಡೇಶ್ವರ ಭಾಗವಹಿಸಿದ್ದರು.