ಕೃಷಿಯೊಂದಿಗೆ ಉಪಕಸಬು ಅಳವಡಿಸಿಕೊಳ್ಳಿ

| Published : Nov 07 2024, 11:55 PM IST

ಸಾರಾಂಶ

ಕೋಳಿ-ಕುರಿ ಸಾಕಾಣಿಕೆ, ಜೇನು, ಹೈನುಗಾರಿಕೆ ಮಾಡಿ ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು

ಗದಗ: ಕೃಷಿಯಲ್ಲಿ ಗುಣಾತ್ಮಕ ಪ್ರಗತಿಯಾಗಿದ್ದು, ಕೃಷಿಯೊಂದಿಗೆ ಉಪಕಸಬು ಮಾಡುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.

ಅವರು ನಗರದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಮೇವುಂಡಿಯ ಡೀಲ್ ಫೌಂಡೇಶನ್ ಹಾಗೂ ಸಿಡ್‌ಬಿದಿಂದ ನಡೆದ ಸುಸ್ಥಿರ ಜೀವನೋಪಾಯ ಸ್ವಾವಲಂಬನಾ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಪಡೆದುಕೊಂಡು ಕೋಳಿ-ಕುರಿ ಸಾಕಾಣಿಕೆ, ಜೇನು, ಹೈನುಗಾರಿಕೆ ಮಾಡಿ ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು ಅಂದಾಗ ಮಾತ್ರ ಕುಟುಂಬ, ಸಮಾಜ, ದೇಶ ಆರ್ಥಿಕವಾಗಿ ಮುನ್ನಡೆ ಸಾಧಿಸಲು ಸಾಧ್ಯ ಎಂದರು.

ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಮಹಿಳೆಯರು ಮನೆಗೆಲಸ ಮುಗಿದ ಬಳಿಕ ಸಣ್ಣ ಸಣ್ಣ ಉದ್ಯಮ ಆರಂಭಿಸಬೇಕು. ಸ್ತ್ರೀ ಶಕ್ತಿ ದೊಡ್ಡದು. ಮಹಿಳೆಯರು ಸಂಘಟಿತರಾಗಿ ಸಂಘ ಬಲವರ್ಧನೆ ಮಾಡುವ ಮೂಲಕ ತಾವು ಆರ್ಥಿಕವಾಗಿ ಸದೃಢರಾಗಬೇಕೆಂದರು.

ಜಿಮ್ಸ್ ನಿರ್ದೇಶಕ ಡಾ.ಬಿ.ಪಿ. ಬೊಮ್ಮನಹಳ್ಳಿ, ಗ್ರಾಮೀಣ ವಿವಿ ಡಾ. ಸುರೇಶ ನಾಡಗೌಡ್ರ ಮಾತನಾಡಿ, ವಿಕಲಚೇತನರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಉದ್ಯೋಗ ಅವಕಾಶ ಸೃಷ್ಠಿಸುವಲ್ಲಿ ಸಂಸ್ಥೆ ಚೆನ್ನಾಗಿ ಕಾರ್ಯ ಮಾಡುತ್ತಿದೆ ಎಂದರು.

ಈ ವೇಳೆ ಸಾಧನೆ ಮಾಡಿದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ನಗದು ಬಹುಮಾನದೊಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಜಿ.ಎ.ಅರುಣ, ಸುರೇಂದ್ರ ಸರಾಫ, ಡಾ. ಬಿ.ಡಿ. ಬಿರಾದಾರ, ಡಾ. ಎಸ್.ಎಲ್. ಪಾಟೀಲ, ಗಿರೀಶ್ ದೀಕ್ಷೀತ್, ಡಾ.ಸಿ.ಕೆ. ವೇಣುಗೋಪಾಲ, ಎಸ್.ಕೆ. ಮುದ್ಲಾಪೂರ, ಡಾ. ಜಾವೇದ ಮುಲ್ಲಾ ಸೇರಿದಂತೆ ಮುಂತಾದ ಗಣ್ಯರು ಇದ್ದರು.

ಸಿದ್ಧಲಿಂಗೇಶ್ವರ ಕಲಾ ತಂಡದಿಂದ ಪ್ರಾರ್ಥನೆ ಗೀತೆ ಹಾಗೂ ಜನಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶನಗೊಂಡಿತು. ಉಮಾ ಚಿಲಗೌಡ್ರ ಸ್ವಾಗತಿಸಿದರು. ಶಿವಕುಮಾರ ಶಿರೋಳ ಹಾಗೂ ವೀಣಾ ಸಾಕಣ್ಣವರ ನಿರೂಪಿಸಿದರು. ಸಾಗರ ವಿರುಪಣ್ಣವರ ವಂದಿಸಿದರು.

ನೇತ್ರದಾನಕ್ಕೆ ವಾಗ್ದಾನ

ವಿಕಲಚೇತನರ ಬದುಕು ಬವಣೆ ಅರಿತ ಸೊರಟೂರಿನ ಪ್ರಗತಿಪರ ರೈತ ಅರವಿಂದ ರಾಜಪುರೋಹಿತ ಮರಣಾ ನಂತರ ನೇತ್ರದಾನ ಮಾಡುವದಾಗಿ ಸ್ವಯಂ ಸ್ಪೂರ್ತಿಯಿಂದ ಘೋಷಿಸಿ ಅಗತ್ಯ ದಾಖಲೀಕರಣಕ್ಕೆ ಕೇಳಿಕೊಂಡರು. ಜಿಮ್ಸ್ ನಿರ್ದೇಶಕ ಡಾ.ಬಿ.ಪಿ. ಬೊಮ್ಮನಹಳ್ಳಿ ಜಿಮ್ಸ್‌ದಲ್ಲಿ ನೇತ್ರದಾನ-ದೇಹದಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದರು.