ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆ, ಆದರ್ಶವನ್ನು ಈ ದೇಶದ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆ, ಆದರ್ಶವನ್ನು ಈ ದೇಶದ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಜ ಕಲ್ಯಾಣ ಇಲಾಖೆ ಹಾಗು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ೧೩೫ನೇ ಜಯಂತಿ ಕಾರ್ಯಕ್ರಮ, ನೂತನವಾಗಿ ಸುಮಾರು ೪.೬೨ ಕೋ. ರು. ವೆಚ್ಚದಲ್ಲಿ ನಗರದ ಹೃದಯ ಭಾಗ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಮೀಪ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ರೂಪಿಸಿಕೊಟ್ಟಿರುವ ಸಂವಿಧಾನದ ಆಶಯದಂತೆ ನಾವೆಲ್ಲರೂ ಬದುಕಿದಾಗ ಮಾತ್ರ ಅವರ ಜನ್ಮದಿನ ಸಾರ್ಥಕವಾಗುತ್ತದೆ. ಅಂಬೇಡ್ಕರ್‌ರವರ ಭವನ ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಊಟದ ಕೊಠಡಿ ನಿರ್ಮಾಣಕ್ಕೆ ೨ ಕೋ.ರು. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡಲು ಶ್ರಮಿಸುವುದಾಗಿ ಭರವಸೆ ನೀಡಿದರು.ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಉಪನ್ಯಾಸ ನೀಡಿ, ಅಂಬೇಡ್ಕರ್ ಬಾಲ್ಯ ಜೀವನ, ವಿದ್ಯಾಭ್ಯಾಸ ಮತ್ತು ಅನುಭವಿಸಿದ ನೋವು, ಅವಮಾನ, ಶೋಷಣೆಗಳು ಹಾಗು ಸಂವಿಧಾನ ರಚಿಸುವಲ್ಲಿ ಅವರ ಶ್ರಮ ವಿವರಿಸಿದರು.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮ ಬದರಿನಾರಾಯಣ, ಪೌರಾಯುಕ್ತ ಕೆ.ಎನ್ ಹೇಮಂತ್, ತಹಸೀಲ್ದಾರ್ ಪರುಸಪ್ಪ ಕುರುಬರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಆಶಾಲತ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ಗಣೇಶ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್.ಗೋಪಾಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿದ್ದಬಸಪ್ಪ, ಹಿರಿಯ ಸದಸ್ಯ ಬಿ.ಕೆ ಮೋಹನ್ ಇತರ ಮುಖಂಡರು ಹಾಜರಿದ್ದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿ, ಸಹಾಯಕ ನಿರ್ದೇಶಕ ಕೆ.ಜಿ ಶಿವಕುಮಾರ್ ಸ್ವಾಗತಿಸಿದರು. ಡಾ. ಬಿ.ಆರ್.ಅಂಬೇಡ್ಕರ್, ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ವಿವಿಧ ಕಲಾ ತಂಡಗಳೊಂದಿಗೆ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಂಬೇಡ್ಕರ್ ವೃತ್ತದಿಂದ ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ಡಾ.ಪುನೀತ್ ರಾಜಕುಮಾರ್ ರಸ್ತೆಯಲ್ಲಿ ಸಾಗಿ ಅಂಬೇಡ್ಕರ್ ಭವನ ತಲುಪಿತು.