ಕಾನೂನು ಬದ್ಧ ಮಕ್ಕಳ ದತ್ತು ಪಡೆಯಿರಿ: ಶರಣಪ್ಪ

| Published : Nov 29 2024, 01:03 AM IST

ಕಾನೂನು ಬದ್ಧ ಮಕ್ಕಳ ದತ್ತು ಪಡೆಯಿರಿ: ಶರಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು.

ಹೊಸಪೇಟೆ: ಈ ನೆಲದ ಕಾನೂನಿನಂತೆ ಮಕ್ಕಳನ್ನು ದತ್ತು ಪಡೆಯಬೇಕು. ಈ ಹಿಂದೆ ಪಡೆಯುತ್ತಿದ್ದ ಸಾಂಪ್ರದಾಯಿಕ ದತ್ತು ಪಡೆಯುವುದನ್ನು ಬಿಟ್ಟು ಕಾನೂನು ಪ್ರಕಾರವೇ ದತ್ತು ಪಡೆಯಬೇಕು ಎಂದು ಮಕ್ಕಳ ರಕ್ಷಣಾಧಿಕಾರಿ ಶರಣಪ್ಪ ಹೇಳಿದರು.

ನಗರದ ಸಂಕ್ಲಾಪುರದ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ನಿಮಿತ್ತ ದತ್ತು ಪಡೆಯಲು ಇಚ್ಚಿಸುವಂತಹ ಪೋಷಕರಿಗೆ ಹಾಗೂ ದತ್ತು ತೆಗೆದುಕೊಳ್ಳಲು ಆನ್‌ಲೈನ್‌ ನೋಂದಣಿ ಮಾಡಿಸಿರುವ ಪೋಷಕರಿಗೆ ಕಾನೂನು ಬದ್ಧ ದತ್ತು ಹಾಗೂ ದತ್ತು ಪ್ರಕ್ರಿಯೆ, ದತ್ತುವಿನ ಮಾನದಂಡಗಳ ಕುರಿತು ನಡೆದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲರೂ ಕಾನೂನುಬದ್ಧ ದತ್ತು ಪ್ರಕ್ರಿಯೆ ಕುರಿತು ಅರಿತುಕೊಳ್ಳಬೇಕು ಎಂದರು.

ಸರ್ಕಾರಿ ವಿಶೇಷ ದತ್ತು ಕೇಂದ್ರದ ಜಿಲ್ಲಾ ಸಂಯೋಜಕಿ ವಿದ್ಯಾಬಾಯಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು. ಕುಟುಂಬದಲ್ಲಿನ ದತ್ತು ಪಡೆಯುವುದಕ್ಕೆ ಸರ್ಕಾರದ ಯಾವುದೇ ಮಾನ್ಯತೆ ಇಲ್ಲ. ಕಾನೂನಿನಲ್ಲೂ ಇದಕ್ಕೆ ಮಾನ್ಯತೆ ಇಲ್ಲದಾಗಿದೆ. ಹಾಗಾಗಿ ಸರ್ಕಾರ ರೂಪಿಸಿರುವ ಕಾನೂನಿನ ಅನ್ವಯವೇ ದತ್ತು ಪಡೆಯಬೇಕು. ಈ ದತ್ತು ಪ್ರಕ್ರಿಯೆಯಲ್ಲಿ ದತ್ತು ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಪ್ರತಿಯೊಂದು ಮಾಹಿತಿ ಬೆಂಗಳೂರು ಹಾಗೂ ಹೊಸದಿಲ್ಲಿ ಮುಖ್ಯ ಕಚೇರಿಗಳ ಗಮನಕ್ಕೆ ತರಲಾಗುವುದು. ಸರ್ಕಾರಿ ನಿಯಮಾವಳಿ ಮಾನದಂಡದ ಅನ್ವಯವೇ ದತ್ತು ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು.

ಜಿಲ್ಲಾ ಸಂಯೋಜಕರು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಷಣ್ಮುಖ ಮಾತನಾಡಿ, ಬಾಲ್ಯವಿವಾಹ, ಬಾಲಕಾರ್ಮಿಕ ಸೇರಿದಂತೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಬೇಕು. ಇದರಿಂದ ಮಕ್ಕಳಿಗೆ ತಕ್ಷಣವೇ ನೆರವು ದೊರೆಯಲಿದೆ ಎಂದರು.

ಪೋಷಕತ್ವ ಸಂಯೋಜಕ ಸ್ವಾಮಿ ಮಾತನಾಡಿದರು. ಸರ್ಕಾರಿ ವಿಶೇಷ ದತ್ತು ಸಂಸ್ಥೆಯ ಸಮಾಜ ಕಾರ್ಯಕರ್ತೆ ರೇಣುಕಾ ನಿಂಬರಗಿ ನಿರ್ವಹಿಸಿದರು. ಜಿಲ್ಲೆಯ ವಿವಿಧೆಡೆ ಆಗಮಿಸಿದ್ದ ಪೋಷಕರು ಹಾಗೂ ದತ್ತುಕೇಂದ್ರದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.