ಸಾರಾಂಶ
ಕುರುಗೋಡು: ನಮ್ಮ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಜಾನಪದ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದರು.ಉತ್ತರ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಪೈಕಿ ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಗೆ ಅತಿಹೆಚ್ಚು ₹೨೦೦ಕೋಟಿ ಅನುದಾನ ತಂದಿರುವೆ. ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ತಂದು ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಪಡಿಸಲಾಗುವುದು ಎಂದರು.
ರಂಗಭೂಮಿ ಕಲಾವಿದ ಗೆಣಿಕೆಹಾಳು ಎಂ.ತಿಮ್ಮನ ಗೌಡ ಮಾತನಾಡಿ, ಪ್ರಭಾವಿ ದೃಶ್ಯಮಾಧ್ಯಮಗಳ ಪ್ರಭಾವದಿಂದ ಗ್ರಾಮೀಣ ಜನಪದ ಕಲೆಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಭಾಗದಲ್ಲಿ ನೂರಾರು ಜಾನಪದ ಕಲಾವಿದರು ಜೀವಂತವಾಗಿದ್ದಾರೆ ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಕಲೆ ಉಳಿಸಿ ಬೆಳೆಸಲು ಕಾಲಕಾಲಕ್ಕೆ ಉತ್ಸವ ಆಯೋಜಿಸುವ ಅಗತ್ಯವಿದೆ, ವಿವಿಧ ರೀತಿಯ ನಾಟಕ ಹಾಗೂ ಜಾನಪದ ಹಾಡು ಇಂದಿಗೂ ಹಳ್ಳಿಗಳಲ್ಲಿ ಜೀವಂತವಾಗಿದೆ. ಕನ್ನಡ ಮತ್ತು ಸಂಸ್ಕೃತ ಇಲಾಖೆ ನಗರಕ್ಕೆ ಸಿಮೀತವಾಗಿದ್ದು ಗ್ರಾಮೀಣ ಕಲಾವಿದರಿಗೆ ಸೂಕ್ತ ಮಾನ್ಯತೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸಿಪಿಐ ವಿಶ್ವನಾಥ ಕೆ. ಹಿದೇಗೌಡ ಮಾತನಾಡಿ, ಜಾನಪದ ಪರಂಪರೆಯು ಉತ್ತಮ ಮೌಲ್ಯ ಸಾರುತ್ತವೆ. ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ದಾಸರಾಗದೇ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಮಾದರಿಯಾಗಬೇಕು
ಜಾನಪದ ಉತ್ಸವ ಆಚರಿಸುವ ಅಗತ್ಯವಿದೆ. ಇಂದಿನ ಯುವಕರು ದುಶ್ಟಟಗಳಿಗೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಗ್ರಾಮೀಣ ಕಲೆಗಳ ಪರಿಚಯ ಅಗತ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾತನಾಡಿ, ಪ್ರಾಂಶುಪಾಲ ಡಾ.ಎಚ್ ರಾಮಕೃಷ್ಣ, ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಗುರಿಮುಖ್ಯ. ವಿದ್ಯಾರ್ಥಿ ದೆಸೆಯಲ್ಲಿಯೇ ಭವಿಷ್ಯದ ಬಗ್ಗೆ ಚಿಂತಿಸಿ, ಮೋಜು ಮಸ್ತಿಗೆ ಕಡಿವಾಣ ಹಾಕಿ ಸನ್ಮಾರ್ಗದಲ್ಲಿ ನಡೆಯುವ ಅಗತ್ಯವಿದೆ, ಅಪರಾಧ ಕೃತ್ಯಗಳಿಂದ ವಿದ್ಯಾರ್ಥಿಗಳು ದೂರ ಉಳಿಯಬೇಕು. ಒಮ್ಮೆ ಎಫ್ ಐ ಆರ್ ದಾಖಲಾದರೆ ಜೀವನವೇ ಹಾಳಾಗುತ್ತದೆ. ಜೀವನದಲ್ಲಿ ಗುರಿ ಮುಖ್ಯವಾಗಿದ್ದು ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳು ವಿವಿಧ ಬಗೆಯ ಬಟ್ಟೆ ತೊಟ್ಟು, ವಿವಿಧ ಬಗೆಯ ಜಾನಪಡ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಕಾಲೇಜಿನ ಸಿಬ್ಬಂದಿ ಗ್ರಾಮೀಣ ಸೊಗಡಿನ ಬಟ್ಟೆ ಧರಿಸಿ ಮಿಂಚಿದರು.
ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಪುರಸಭೆ ಸದಸ್ಯರು, ಕಾಲೇಜು ಅಧ್ಯಾಪಕ ಬಳಗ, ಸಿಬ್ಬಂದಿ ಇದ್ದರು.