ಸಾಧನೆ ಸರಿಯಾಗಿ ಫಲಪ್ರದವಾಗಬೇಕಾದರೆ ಆಧ್ಯಾತ್ಮಿಕ ಮತ್ತು ವ್ಯವಹಾರಿಕ ಎರಡೂ ಮುಖಗಳ ಸಾಧನೆ ಅಗತ್ಯ.

ಕನ್ನಡಪ್ರಭ ವಾರ್ತೆ ಶಿರಸಿ

ಸಾಧನೆ ಸರಿಯಾಗಿ ಫಲಪ್ರದವಾಗಬೇಕಾದರೆ ಆಧ್ಯಾತ್ಮಿಕ ಮತ್ತು ವ್ಯವಹಾರಿಕ ಎರಡೂ ಮುಖಗಳ ಸಾಧನೆ ಅಗತ್ಯ. ಆಧ್ಯಾತ್ಮಿಕ ಸಾಧನೆಯ ನಾಲ್ಕು ಸೋಪಾನಗಳಾದ ಅರ್ಚನೆ, ಜಪ, ಧ್ಯಾನ ಹಾಗೂ ಮನೋಲಯ ಮತ್ತು ವ್ಯವಹಾರಿಕ ಜೀವನದ ನಾಲ್ಕು ಸೋಪಾನಗಳಾದ ಕ್ಷಮೆ, ಧೃತಿ, ಸಮತೆ ಹಾಗೂ ನಿರ್ಮತ್ಸರತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮನುಷ್ಯ ಶಾಂತ ಮನಸ್ಥಿತಿಯನ್ನು ತಲುಪಲು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.

ಚಾತುರ್ಮಾಸ್ಯದ ನಿಮಿತ್ತ ಕುಳಿನಾಡು ಸೀಮೆಯ ಶಿಷ್ಯಭಾಂದವರು ಹಾಗೂ ಮಾತೆಯರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಮನುಷ್ಯನ ಶಾಂತವಾದ ಗುಣವೇ ಶಮ. ಈ ಶಮ ಎನ್ನುವ ಗುಣವನ್ನು ನಾಲ್ಕು ಆಧ್ಯಾತ್ಮಿಕ ಸೋಪಾನಗಳ ಮೂಲಕ ಹತ್ತಬೇಕು. ಮೊದಲನೆಯದು ಅರ್ಚನೆ ಅಥವಾ ಪೂಜೆ. ಮನಸ್ಸನ್ನು ಕೇಂದ್ರೀಕರಿಸಿ ದೇವರ ಅಸ್ತಿತ್ವ ಹಾಗೂ ಸಾನ್ನಿಧ್ಯದ ಚಿಂತನೆಯೊಂದಿಗೆ ಪೂಜೆ ಮಾಡಬೇಕು. ದೇವತಾ ಧ್ಯಾನದೊಂದಿಗೆ ಪೂಜೆ ಮಾಡಿದಾಗ ಮುಂದಿನ ಹಂತವಾದ ಜಪದ ಮನಸ್ಥಿತಿ ಮೂಡುತ್ತದೆ ಎಂದರು.

ಜಪ ಎಂದರೆ ಮಂತ್ರದ ಮೂಲಕ ದೇವರ ಚಿಂತನೆ ಮಾಡುವುದು. ಅಂತರಂಗದಲ್ಲಿ ದೇವರ ಧ್ಯಾನ, ಬಾಯಲ್ಲಿ ಮಂತ್ರದ ಆವರ್ತನೆ-ಇದೇ ಜಪ. ಪ್ರತಿಯೊಂದು ಜಪಕ್ಕೂ ಸಂಬಂಧಪಟ್ಟ ದೇವತೆಯಿದ್ದು, ಜಪ ಮಾಡುವಾಗ ಆ ದೇವರ ಸದಾ ಚಿಂತನೆಯನ್ನು ಮಾಡಬೇಕು ಎಂದು ತಿಳಿಸಿದರು.

ಮೂರನೆಯ ಸೋಪಾನ ಧ್ಯಾನ. ಜಪವನ್ನು ಸರಿಯಾಗಿ ಮಾಡಿದಾಗ ಧ್ಯಾನದ ಮನಸ್ಥಿತಿ ಬರುತ್ತದೆ. ಲಯಬದ್ಧವಾದ ಗತಿಯಲ್ಲಿ ಮನಸ್ಸು ದೇವರ ಕಡೆಗೆ ಸಾಗುವುದೇ ಧ್ಯಾನ. ಅಂತಿಮವಾಗಿ ಧ್ಯಾನಾನುಸ್ಥಿತಿಯಿಂದ ಮನಸ್ಸು ಸಂಪೂರ್ಣವಾಗಿ ಶಾಂತ ಸ್ಥಿತಿಗೆ ತಲುಪುವ ಪರಮಾವಸ್ಥೆಯೇ ಮನೋಲಯ ಎಂದು ಶ್ರೀಗಳು ವಿವರಿಸಿದರು.

ಆಧ್ಯಾತ್ಮಿಕ ಸಾಧನೆಯೊಂದಿಗೆ ಲೌಕಿಕ ಜೀವನದಲ್ಲಿಯೂ ಶಾಂತಿ, ಯಶಸ್ಸು ಮತ್ತು ನೆಮ್ಮದಿಯನ್ನು ಸಾಧಿಸಲು ನಾಲ್ಕು ವ್ಯವಹಾರಿಕ ಗುಣ ಬೆಳೆಸಿಕೊಳ್ಳಬೇಕು. ತಪ್ಪು ಮಾಡಿದವರ ವಿಷಯದಲ್ಲಿ ಕ್ಷಮೆ ಇರಬೇಕು. ಸಿಟ್ಟು ಬಂದರೂ ಅದನ್ನು ನಿಯಂತ್ರಿಸಬೇಕು. ವಿಧಿಯ ಅಟಾಟೋಪ, ದೊಡ್ಡ ಸಮಸ್ಯೆ ಅಥವಾ ಅನಿರೀಕ್ಷಿತ ಸಂದರ್ಭಗಳು ಎದುರಾದಾಗ ಧೈರ್ಯಗೆಡದೆ ಎದುರಿಸುವ ಧೃತಿ ಇರಬೇಕು. ತನಗೆ ಸೋಲಾದಾಗ ಹತಾಶರಾಗದೆ ಸಮತೆ ಕಾಯ್ದುಕೊಳ್ಳಬೇಕು. ಮತ್ತೊಬ್ಬರಿಗೆ ಗೆಲುವು ದೊರೆತಾಗ ಮಾತ್ಸರ್ಯಪಡದೆ ಸಂತೋಷಪಡುವ ದೊಡ್ಡತನವೇ ನಿರ್ಮತ್ಸರತೆ ಎಂದರು.

ಈ ನಾಲ್ಕು ಆಧ್ಯಾತ್ಮಿಕ ಹಾಗೂ ನಾಲ್ಕು ವ್ಯವಹಾರಿಕ ಸೋಪಾನಗಳ ನಡುವೆ ಪರಸ್ಪರ ಅವಿನಾಭಾವ ಸಂಬಂಧವಿದೆ. ಒಂದು ಹಂತದ ನಂತರ ಮತ್ತೊಂದು ಹಂತ ಮುಂದುವರಿಯುತ್ತಾ ಸಾಧಕನನ್ನು ಶಾಂತ, ಸಂಯಮಿತ ಹಾಗೂ ನೆಮ್ಮದಿಯ ಜೀವನದತ್ತ ಕೊಂಡೊಯ್ಯುತ್ತದೆ. ಭಕ್ತರಲ್ಲಿ ಈ ಎರಡು ಮುಖಗಳ ಸಾಧನೆ ಬೆಳೆದು ಆಧ್ಯಾತ್ಮಿಕ ಉನ್ನತಿಯೊಂದಿಗೆ ಲೌಕಿಕ ಜೀವನದಲ್ಲೂ ಶಾಂತಿ, ಸಂಯಮ ಮತ್ತು ನೆಮ್ಮದಿ ನೆಲೆಸಲಿ ಎಂದರು.

ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಮಾತೆಯರು ಶಂಕರಾಚಾರ್ಯರ ಸ್ತೋತ್ರ, ಗೀತಾ ಪಠಣ ಹಾಗೂ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು. ಮಹನೀಯರು ಗಾಯತ್ರಿ ಅನುಷ್ಠಾನದಲ್ಲಿ ತೊಡಗಿಕೊಂಡಿದ್ದರು. ಇದೇ ಸಂದರ್ಭ ಮೆಣಸಿ ಸೀಮೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಿತು.

ಕಾರ್ಯಕ್ರಮದಲ್ಲಿ ರಾಜೇಂದ್ರ ಹೆಗಡೆ ಕೈಗಡಿ, ಪ್ರಸನ್ನ ಗಾಂವಕರ, ರಾಮಚಂದ್ರ ಹೆಗಡೆ, ವೆಂಕಟರಮಣ ಹೆಗಡೆ ಸೇರಿ ಹಲವರಿದ್ದರು. ಮಠದ ಕಿರಿಯ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಸಾನ್ನಿಧ್ಯ‌ ವಹಿಸಿದ್ದರು.