ಗಾಂಧೀಜಿ ಸತ್ಯ, ಅಹಿಂಸೆ ತತ್ವ ಅಳವಡಿಸಿಕೊಳ್ಳಿ: ಪ್ರೊ.ಎಂ.ಆರ್.ಗಂಗಾಧರ್

| Published : Oct 03 2024, 01:24 AM IST

ಗಾಂಧೀಜಿ ಸತ್ಯ, ಅಹಿಂಸೆ ತತ್ವ ಅಳವಡಿಸಿಕೊಳ್ಳಿ: ಪ್ರೊ.ಎಂ.ಆರ್.ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀಜಿ ಅವರ ಸರಳತೆ, ಸತ್ಯ, ಅಹಿಂಸೆ, ಸರ್ವೋದಯ ಮುಂತಾದ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಾಮರಾಜನಗರ ವಿವಿಯಲ್ಲಿ ಗಾಂಧಿ ಜಯಂತಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗಾಂಧೀಜಿ ಅವರ ಸರಳತೆ, ಸತ್ಯ, ಅಹಿಂಸೆ, ಸರ್ವೋದಯ ಮುಂತಾದ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಹೊರವಲಯದ ಸುವರ್ಣ ಗಂಗೋತ್ರಿಯಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಸಾಕಾರಗೊಳ್ಳಲು ಸಾಧ್ಯವಾಗುತ್ತದೆ. ಸ್ವದೇಶಿ ಚಿಂತನೆ ಜಾಗೃತಿ ಆಂದೋಲನ ಇಂದು ಹೆಚ್ಚು ಪ್ರಸ್ತುತ. ಶಿಸ್ತು ಶ್ರದ್ಧೆಯನ್ನು ಅಧ್ಯಯನದಲ್ಲಿ ಅಳವಡಿಸಿಕೊಳ್ಳಬೇಕು. ಕೀರ್ತಿ, ಅಧಿಕಾರ, ಹಣಕ್ಕಾಗಿ ಬಯಸದೆ ಸೇವಾ ಮನೋಭಾವದಿಂದ ದೇಶಕ್ಕಾಗಿ ಶ್ರಮಿಸಬೇಕು. ವಿಶ್ವವಿದ್ಯಾಲಯದ ಬೆಳವಣಿಗೆಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕುಲಸಚಿವ (ಮೌಲ್ಯಮಾಪನ) ಪ್ರೊ.ಜಿ.ವಿ.ವೆಂಕಟರಮಣ ಮಾತನಾಡಿ, ಗಾಂಧೀಜಿ ಅವರು ದಕ್ಷಿಣ ಆಫ್ರಿಕದಲ್ಲಿ ವರ್ಣಭೇದ ನೀತಿಯಿಂದ ಅನುಭವಿಸಿದ ಅಪಮಾನ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಭಾರತಕ್ಕೆ ಬಂದ ನಂತರ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿ ಮಹಾತ್ಮರಾದರು. ಅವರ ಸತ್ಯ, ಅಹಿಂಸೆ ಚಳುವಳಿ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಯುವಪೀಳಿಗೆ ಗಾಂಧೀಜಿಯನ್ನು ಹೆಚ್ಚು ಅಧ್ಯಯನ ಮಾಡಬೇಕು ಎಂದರು.

ಪಿಎಂಇಬಿ ನಿರ್ದೇಶಕ ಡಾ.ವಿ.ಜಿ.ಸಿದ್ದರಾಜು ಮಾತನಾಡಿ, ಚಾಮರಾಜನಗರ ವಿಶ್ವವಿದ್ಯಾಲಯದಿಂದ ಸೂಕ್ತವಾದ ಒಂದು ಗ್ರಾಮವನ್ನು ದತ್ತು ಸ್ವೀಕರಿಸಿ, ಆ ಗ್ರಾಮದಲ್ಲಿ ಗಾಂಧೀಜಿಯವರ ಚಿಂತನೆ ತತ್ವಾದರ್ಶಗಳನ್ನು ಅನುಷ್ಠಾನಗೊಳಿಸಿ ಮಾದರಿ ಗ್ರಾಮವಾಗಿ ಪರಿವರ್ತಿಸಲು ಯೋಜಿಸಲಾಗಿದೆ ಎಂದರು.

ಸ್ವಚ್ಛತಾ ಅಭಿಮಾನ:

ಗಾಂಧಿ ಜಯಂತಿಯ ಅಂಗವಾಗಿ ವಿಶ್ವವಿದ್ಯಾಲಯದ ಮುಖ್ಯರಸ್ತೆಯಿಂದ ಸ್ವಚ್ಛತಾ ಕಾರ್ಯವನ್ನು ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಚಾಲನೆ ನೀಡಿದರು. ಸ್ವಚ್ಛತಾ ಕಾರ್ಯದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದರು.

ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ.ಆರ್.ಮಹೇಶ್ ಕೋಡಿಉಗನೆ, ಬೋಧಕ, ಬೋಧಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೂಪ ಗಾಂಧೀಜಿ ಕುರಿತು ಹಾಡಿದರು. ಅಧ್ಯಾಪಕ ಬಿ.ಗುರುರಾಜು ಯರಗನಹಳ್ಳಿ ಕಾರ್ಯಕ್ರಮ ನಿರೂಪಿಸಿದರೆ, ಶ್ವೇತ ಸ್ವಾಗತಿಸಿದರು. ದಿವ್ಯ ವಂದಿಸಿದರು.