ಆಧುನಿಕ ಕೃಷಿ ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯಿರಿ

| Published : Sep 11 2025, 12:03 AM IST

ಸಾರಾಂಶ

ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಯೂರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ದ್ರವರೂಪದ ನ್ಯಾನೋ ಯೂರಿಯಾ ಮತ್ತು ಡಿ.ಎ.ಪಿ ಹೆಚ್ಚಾಗಿ ಬಳಸಿ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಯೂರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ದ್ರವರೂಪದ ನ್ಯಾನೋ ಯೂರಿಯಾ ಮತ್ತು ಡಿ.ಎ.ಪಿ ಹೆಚ್ಚಾಗಿ ಬಳಸಿ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ಬುಧವಾರ ನಗರದ ಕಸಬಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ಸಲಹೆ ನೀಡುವ ಇ-ಸಾಪ್, ಪ್ರೂಟ್ಸ್ ಮತ್ತು ಕೆ-ಕಿಸಾನ್ ತಂತ್ರಾಂಶಗಳ ಕಾರ್ಯವೈಖರಿಗಳನ್ನು ಪರಿಶೀಲಿಸಿ ನಂತರ ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಎಣ್ಣೆಕಾಳು ಪ್ರಾತ್ಯಕ್ಷಿಕೆಗಳ ಕೃಷಿ ಪರಿಕರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ನಾನು ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ರೈತರ ಅನುಕೂಲಕ್ಕಾಗಿ ರೈತ ಸಂಪರ್ಕ ಕೇಂದ್ರಗಳನ್ನು ಪ್ರಾರಂಭಿಸಲಾಗಿತ್ತು. ಇದರಿಂದ ರಾಜ್ಯಾದ್ಯಂತ ರೈತರು ತಮ್ಮ ಸಮಸ್ಯೆಗಳನ್ನು ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಲು ಅನುಕೂಲವಾಗಿದೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು ಮಾತನಾಡಿ ಶಿರಾ ತಾಲೂಕು ಕೇಂದ್ರ ಒಣವಲಯ ಪ್ರದೇಶ ೪ ರ ಕೃಷಿ ವಲಯಕ್ಕೆ ಸೇರಿದ್ದು, ತಾಲೂಕಿನ ಭೌಗೋಳಿಕ ವಿಸ್ತೀರ್ಣ ೧೫೫೩೭೭ ಹೆಕ್ಟೇರ್ ಪ್ರದೇಶದಷ್ಟಿದೆ. ತಾಲೂಕಿನ ಒಟ್ಟು ಸಾಗುವಳಿ ವಿಸ್ತೀರ್ಣ ೭೬೮೭೨ ಹೆಕ್ಟೇರ್ ನಷ್ಟು ಇರುತ್ತದೆ. ತಾಲೂಕಿನ ಮುಖ್ಯ ಬೆಳೆಗಳು ಶೇಂಗಾ, ರಾಗಿ , ತೊಗರಿ ಮತ್ತು ಹತ್ತಿ . ವಾರ್ಷಿಕ ವಾಡಿಕೆ ಮಳೆಯು ಸರಾಸರಿ ೫೨೦.೨೦ ಮಿ.ಮೀ ಇದ್ದು ಬಹಳಷ್ಟು ಮಳೆಯು ನೈರುತ್ಯ ಮಾರುತಗಳಿಂದ ಇರುತ್ತದೆ. ನೈರುತ್ಯ ಮಾರುತವು ಸಾಮಾನ್ಯವಾಗಿ ಜೂನ್ ಮೊದಲನೇ ವಾರದಿಂದ ಪ್ರಾರಂಭವಾಗುತ್ತದೆ. ಆಗಸ್ಟ್-೨೦೨೫ರ ಮಾಹೆಯ ಅಂತ್ಯಕ್ಕೆ ೨೩೯.೪೦ಮಿ.ಮಿ ಇದ್ದು ಇಲ್ಲಿಯವರೆಗೆ ೩೯೧.೦೨ ಮಿ.ಮಿ ಮಳೆಯಾಗಿರುತ್ತದೆ. ಅದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಸಮರ್ಪಕವಾಗಿ ಮಳೆ ಬರದೇ ಇದ್ದುದರಿಂದ ಬಿತ್ತನೆ ಕುಂಠಿತಗೊಂಡಿದೆ ಕೃಷಿ ಬೆಳೆಗಳ ಒಟ್ಟು ಗುರಿ ೪೬೬೭೫ಹೆಕ್ಟೇರ್ ಪ್ರದೇಶ ವಿಸ್ತೀರ್ಣವಿದ್ದು ಆಗಸ್ಟ್-೨೦೨೫ ಮಾಹೆ ಅಂತ್ಯಕ್ಕೆ ೩೯೬೦೦ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದ್ದು ಶೇ ೮೪.೮೪ ರಷ್ಟು ಬಿತ್ತನೆ ಪ್ರಗತಿಯಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ತಾಂತ್ರಿಕ ಕೃಷಿ ಅಧಿಕಾರಿ ನಟರಾಜು ಕೆ.ಎಸ್, ಕೃಷಿ ಅಧಿಕಾರಿ ರುಕ್ಮೀಣಿ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಮಾಜಿ ತಾ.ಪಂ. ಸದಸ್ಯ ಪಿ.ಬಿ.ನರಸಿಂಹಯ್ಯ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಣಿಕಂಠ, ನಗರ ಅಧ್ಯಕ್ಷ ಅಂಜನ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.