ಸಾರಾಂಶ
ಧಾರವಾಡ: ನ್ಯಾಯಾಂಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರಗೊಳ್ಳುತ್ತಿದ್ದು, ಕಾನೂನು ಪದವೀಧರರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಹೇಳಿದರು.
ಇಲ್ಲಿಯ ಕೃಷಿ ವಿವಿಯಲ್ಲಿ ಶುಕ್ರವಾರ ನಡೆದ ರಾಜ್ಯ ಕಾನೂನು ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದ ಭಾಷಣ ಮಾಡಿದ ಅವರು, ಕಾನೂನು ಕ್ಷೇತ್ರದಲ್ಲಿ ತೀವ್ರ ಬದಲಾವಣೆಗಳಾಗುತ್ತಿದ್ದು, ಅದರ ವ್ಯಾಪ್ತಿ ಹೆಚ್ಚಾಗುತ್ತಿದೆ. ತಂತ್ರಜ್ಞಾನ, ವಿಜ್ಞಾನ ಬೆಳೆದಂತೆ ನ್ಯಾಯಾಂಗದ ಕಾರ್ಯವೈಖರಿಯೂ ಬದಲಾಗುತ್ತಿದ್ದು, ಹೊಸ ಸವಾಲುಗಳನ್ನು ಎದುರಿಸಲು ಯುವ ಕಾನೂನು ಪದವೀಧರರು ಸಿದ್ಧರಾಗಬೇಕು ಎಂದರು.ನಿಮ್ಮ ಸಾಮರ್ಥ್ಯ ಅರಿಯಿರಿ
ಸುಧಾರಣೆ ಮತ್ತು ಪರಿವರ್ತನೆಗೆ ಸದಾ ಅವಕಾಶವಿದ್ದು, ನೀವು ಏನನ್ನು ಮಾಡುತ್ತೀರಿ ಎಂಬುದು ಮುಖ್ಯವಲ್ಲ. ಹೇಗೆ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಕೈಗೊಂಡ ಕಾರ್ಯವನ್ನು ಸಂಪೂರ್ಣ ಪರಿಶ್ರಮ ಮತ್ತು ನಿಷ್ಠೆಯಿಂದ ಮಾಡುವಂತೆ ಸಲಹೆ ನೀಡಿದರು.ಎಲ್ಲದಕ್ಕೂ ಹಿರಿಯರನ್ನೇ ಅನುಕರಿಸುವುದಕ್ಕಿಂತ ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ತಮ್ಮತನವನ್ನು ಸಾಧಿಸಿಕೊಳ್ಳಬೇಕು. ಕಾನೂನು ಶಿಕ್ಷಣ ಸಂಸ್ಥೆಗಳನ್ನು ಶ್ರೇಣಿಕರಿಸಿ ಅವುಗಳಿಂದ ಹೊರ ಹೊಮ್ಮುವ ವಿದ್ಯಾರ್ಥಿಗಳನ್ನು ಆ ಸಂಸ್ಥೆಯ ಶ್ರೇಣಿಯ ಆಧಾರದ ಮೇಲೆ ಅಳೆಯುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ನ್ಯಾಯಮೂರ್ತಿ ಚಂದ್ರಚೂಡ್, ಇದೊಂದು ತರ್ಕಹೀನ ಪದ್ಧತಿ ಎಂದರು.
ಅತ್ಯಂತ ಸಾಧಾರಣ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದು ವೃತ್ತಿಯಲ್ಲಿ ಅಪಾರ ಯಶಸ್ಸನ್ನು ಪಡೆದಿರುವ ಉದಾಹರಣೆಗಳಿವೆ. ಹೀಗಾಗಿ, ಸಂಸ್ಥೆಯ ಶ್ರೇಣಿಯ ಬಗ್ಗೆ ಹೆಚ್ಚು ಗಮನ ಕೊಡದೇ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ನಂಬಿಕೊಂಡು ಅಧ್ಯಯನಶೀಲರಾಗಲು ತಿಳಿಸಿದರು.ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಅನೇಕ ಅವಕಾಶಗಳು ಮುಕ್ತವಾಗಿದ್ದು, ನಿರಂತರ ಪ್ರಯತ್ನ ಮತ್ತು ನಿಷ್ಠೆಯಿಂದ ಈ ಅವಕಾಶಗಳನ್ನು ಪದವೀಧರರು ಸದುಪಯೋಗ ಪಡಿಸಿಕೊಳ್ಳಬೇಕು. ಕಾಲಕಾಲಕ್ಕೆ ಬದಲಾಗುವ ಕಾನೂನುಗಳನ್ನು ಸರಿಯಾಗಿ ಅಭ್ಯಸಿಸಿ ವೃತ್ತಿಯಲ್ಲಿ ಯಶಸ್ವಿಯಾಗಲು ಸಲಹೆ ನೀಡಿದರು.
ನಿವೃತ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಸೇರಿದಂತೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ನ್ಯಾಯಮೂರ್ತಿ ಅಶೋಕ ಬಿ. ಹಿಂಚಗೇರಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕಾನೂನು ಸಚಿವ ಡಾ. ಎಚ್.ಕೆ. ಪಾಟೀಲ ಮಾತನಾಡಿದರು. ಕುಲಪತಿ ಪ್ರೊ. ಸಿ. ಬಸವರಾಜು ಕಾಲೇಜು ಸಾಧನೆ ವಿವರಿಸಿದರು.ಪದವಿ ಪ್ರದಾನ
ಘಟಿಕೋತ್ಸವದಲ್ಲಿ 2991 ಪುರುಷ ಮತ್ತು 2243 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 5234 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ಕಾನೂನು ಕೋರ್ಸ್‌ಗಳಲ್ಲಿ ಹೆಚ್ಚಿನ ಅಂಕ ಪಡೆದ ಹತ್ತು ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಹಾಗೂ ರ್‍ಯಾಂಕ್ ಪ್ರಮಾಣ ಪತ್ರಗಳನ್ನು ಇದೇ ಸಂದರ್ಭದಲ್ಲಿ ಕಾನೂನು ಸಚಿವರು ಪ್ರದಾನ ಮಾಡಿದರು.ಕನ್ನಡ ಮಾಧ್ಯಮದಲ್ಲಿ ಕಾನೂನು ಕಲಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮೂರು ವರ್ಷದ ಹಾಗೂ ಐದು ವರ್ಷದ ಕಾನೂನು ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ರ್‍ಯಾಂಕ್, ಪ್ರಮಾಣ ಪತ್ರ ನೀಡಲಾಯಿತು. ಜೊತೆಗೆ ಒಟ್ಟು 15 ಅಭ್ಯರ್ಥಿಗಳಿಗೆ ಪಿಎಚ್.ಡಿ ಪ್ರದಾನವಾಯಿತು.
ವೇದಿಕೆಯಲ್ಲಿ ಕುಲಸಚಿವರಾದ ಅನುರಾಧ ವಸ್ತ್ರದ, ಪ್ರೊ. ರತ್ನಾ ಭರಮಗೌಡರ ಇದ್ದರು.ಆಳವಾದ ಅಧ್ಯಯನ ಇರಲಿ
ವೃತ್ತಿಯಲ್ಲಿ ಕಾನೂನಿನ ಪಠ್ಯವನ್ನಷ್ಟೇ ನಂಬಿಕೊಳ್ಳದೇ ಆ ಕಾನೂನಿನ ಹೊರ ವ್ಯಾಪ್ತಿ ಏನಿದೆ ಎಂಬುದನ್ನು ಅರಿತುಕೊಂಡರೆ ಯಶಸ್ಸು ಸಾಧ್ಯ. ಇದು ಸಾಧಿಸಬೇಕಾದರೆ, ಕಾನೂನು ಬಿಟ್ಟು ಅನೇಕ ವಿಷಯಗಳ ಆಳವಾದ ಅಧ್ಯಯನ ಅಗತ್ಯವಾಗಿದೆ ಎಂದರು.
ಡಿ.ವೈ. ಚಂದ್ರಚೂಡ್