ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಪೌಷ್ಠಿಕಾಂಶಯುಕ್ತ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲು ನೈಸರ್ಗಿಕ ಕೃಷಿಗೆ ಒತ್ತು ನೀಡುವ ಸುಭಾಷ್ ಪಾಳೇಕರ್ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದರು.ಪದ್ಮಶ್ರೀ ಡಾ. ಸುಭಾಷ್ ಪಾಳೇಕರ್ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮಂಡ್ಯದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ 75 ಮಂದಿ ಸುಭಾಷ್ ಪಾಳೇಕರ್ ಕೃಷಿ ಪದ್ಧತಿ ಅಳವಡಿಸಿಕೊಂಡ ಕೃಷಿಕರಿಗೆ, ಕೃಷಿ ಕಾರ್ಮಿಕರಿಗೆ ಮತ್ತು ರೈತರಿಗೆ ತೆಂಗಿನ ಸಸಿ ವಿತರಿಸಿ ಮಾತನಾಡಿದರು.
ಸುಭಾಷ್ ಪಾಳೇಕರ್ ರವರು ನಮಗೆ ಅತ್ಯುತ್ತಮ ಕೃಷಿ ಪದ್ಧತಿಯನ್ನು ಬಿಟ್ಟು ಹೋಗಿದ್ದಾರೆ. ರೈತರಿಗೆ ತಮ್ಮದೇ ಆದ ನೈಸರ್ಗಿಕ ಕೃಷಿ ಪದ್ಧತಿ ಪರಿಚಯಿಸಿ ಶಾಶ್ವತ ಪರಿಹಾರೋಪಾಯ ಕೊಟ್ಟು ಹೋಗಿದ್ದಾರೆ. ಈ ಪದ್ಧತಿಯನ್ನು ಹೆಚ್ಚಿನದಾಗಿ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ರೈತರು ಅಳವಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲೂ ಪಸರಿಸುವ ಕಾರ್ಯ ಭರದಿಂದ ಸಾಗುತ್ತಿರುವುದು ಖುಷಿಯ ಸಂಗತಿಯಾಗಿದೆ ಎಂದು ತಿಳಿಸಿದರು.ಜಿಲ್ಲೆಯ 2 ಲಕ್ಷ ಹೆಕ್ಟರ್ ಭೂ ಪ್ರದೇಶದಲ್ಲಿ ವ್ಯವಸಾಯ ಚಟುವಟಿಕೆ ನಡೆಯುತ್ತಿದೆ. ಇದರಲ್ಲಿ ಸುಮಾರು 60,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. 55000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಸುಮಾರು 45,000 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಹಾಗೂ ಇನ್ನಿತರ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಬೆಳೆಯನ್ನು ಯಾವುದೇ ರೋಗಕ್ಕೆ ತುತ್ತಾಗದಂತೆ ಕಾಯ್ದುಕೊಳ್ಳುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ರೋಗಗಳು ಬಾಧಿಸಬಾರದೆಂದರೆ ಸುಭಾಷ್ ಪಾಳೇಕರ್ ಕೃಷಿ ಪದ್ಧತಿಯನ್ನು ಅನುಸರಿಸುವುದು ಬಹಳ ಸೂಕ್ತ. ಜೊತೆಗೆ ಇದರ ಬಳಕೆಯಿಂದ ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರ ಪದಾರ್ಥಗಳು ಉತ್ಪಾದನೆಯಾಗುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಒಂದು ಲಕ್ಷ ಜನರಿಗೆ ಸಕ್ಕರೆ ಕಾಯಿಲೆ ಇದೆ. 1 ಲಕ್ಷ ಜನರಿಗೆ ಬಿಪಿ ಇದೆ. 1028 ಜನರಿಗೆ ಕ್ಯಾನ್ಸರ್ ಇದೆ. ಆಹಾರದ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತಿರುವುದೇ ಇದೆಲ್ಲದಕ್ಕೂ ಕಾರಣವಾಗಿದೆ. ಜಿಲ್ಲೆಯಲ್ಲಿ 1.75 ಸಾವಿರ ಲಕ್ಷ ಟನ್ ರಾಸಾಯನಿಕ ಗೊಬ್ಬರವನ್ನು ಉಪಯೋಗ ಮಾಡುತ್ತಿದ್ದೇವೆ. ಇದಕ್ಕೆ ಸರ್ಕಾರ ಜಿಲ್ಲೆಯೊಂದಕ್ಕೆ 600 ಕೋಟಿ ರು. ಸಬ್ಸಿಡಿ ನೀಡುತ್ತದೆ. ಈ ರಾಸಾಯನಿಕ ಗೊಬ್ಬರಗಳು ರೈತರಿಗೆ ಮಾರಕವಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರವಾಗಿ ಹಸುವಿನ ಗಂಜಲ, ಗೊಬ್ಬರ ಸೊಪ್ಪು, ಹೊಂಗೆ ಸೊಪ್ಪು, ಕಬ್ಬಿನ ತರುವು ಇವುಗಳನ್ನು ಬಳಸಿಕೊಂಡು ಗೊಬ್ಬರ ಮಾಡಿದರೆ ಮಣ್ಣಿನ ಫಲವತ್ತತೆಯನ್ನೂ ಸಹ ಹೆಚ್ಚುತ್ತದೆ. ಸರ್ಕಾರ ರಾಸಾಯನಿಕ ಗೊಬ್ಬರಗಳಿಗೆ ಕಡಿವಾಣ ಹಾಕಿ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಮನವಿ ಮಾಡಿದರು.ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ತೀವ್ರ ಬರಗಾಲ ಕಾಡುತ್ತಿತ್ತು. ಕಳೆದ ವರ್ಷ ಕೃಷಿ ಇಲಾಖೆಯು ಕರ್ನಾಟಕದಲ್ಲಿ 148 ಲಕ್ಷ ಟನ್ ಆಹಾರವನ್ನು ಉತ್ಪಾದನೆ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡಿತ್ತು. ಆದರೆ ಬರಗಾಲ ಸಂಬಂಧ 128 ಲಕ್ಷ ಟನ್ ಆಹಾರ ಉತ್ಪಾದನೆ ಮಾತ್ರ ಸಾಧ್ಯವಾಯಿತು. ಇದರಿಂದ 20 ಲಕ್ಷ ಟನ್ ಆಹಾರ ಉತ್ಪಾದನೆಯಲ್ಲಿ ಕೊರತೆಯಾಯಿತು. ಇದರಿಂದ ಆಹಾರೋತ್ಪನ್ನಗಳ ಬೆಲೆ ಹಚ್ಚಳಕ್ಕೂ ಕಾರಣವಾಯಿತು ಎಂದರು.
ಬಿಜೆಪಿ ಮುಖಂಡರಾದ ಶಿವಣ್ಣ, ಪಿ.ಇ.ಟಿ. ಅಧ್ಯಕ್ಷ ಕೆ.ಸಿ.ವಿಜಯಾನಂದ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಚಂದಗಾಲು ಶಿವಣ್ಣ, ರೈತನಾಯಕಿ ಸುನಂದಾ ಜಯರಾಂ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಕೆಡಿಪಿ ಸದಸ್ಯ ದ್ಯಾವಪ್ಪ, ಅನಂತರಾವ್ ಕೆರಗೋಡು ಇತರರಿದ್ದರು.