ಪುನಃ ಹೆಚ್ಚಾದ ಮಳೆ ಅಬ್ಬರ: ಮರ ಬಿದ್ದು ಕಾರ್ ಜಖಂ

| Published : Jul 22 2024, 01:18 AM IST / Updated: Jul 22 2024, 01:19 AM IST

ಪುನಃ ಹೆಚ್ಚಾದ ಮಳೆ ಅಬ್ಬರ: ಮರ ಬಿದ್ದು ಕಾರ್ ಜಖಂ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಮತ್ತೆ ಮಳೆಯ ಆರ್ಭಟ ಮುಂದುವರಿ ದಿದ್ದು, ಬಾರೀ ಗಾಳಿಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದು ಜಖಂಗೊಂಡಿದೆ.

ಏರ್‌ಬ್ಯಾಗ್ ತೆರೆದುಕೊಂಡು ಕಾರಿನಲ್ಲಿದ್ದ ವ್ಯಕ್ತಿ ಪಾರು । ಮರ ಬಿದ್ದ ರಭಸಕ್ಕೆತುಂಡಾದ ಕಂಬ: ವಿದ್ಯುತ್ ಸಂಪರ್ಕ ಕಡಿತ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಮತ್ತೆ ಮಳೆಯ ಆರ್ಭಟ ಮುಂದುವರಿ ದಿದ್ದು, ಬಾರೀ ಗಾಳಿಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದು ಜಖಂಗೊಂಡಿದೆ.ಭಾನುವಾರ ಬೆಳಗ್ಗಿನಿಂದ ಮಳೆ ಅಬ್ಬರ ಪುನಃ ಹೆಚ್ಚಾಗಿದ್ದು, ಗಂಟೆಗೊಮ್ಮೆ ಧಾರಾಕಾರ ಮಳೆ ಸುರಿಯುತ್ತಿದೆ. ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಪಟ್ಟಣದ ಚಿಕ್ಕಮಗಳೂರು ರಸ್ತೆಯ ಭದ್ರಾ-ದೇವದಾನ ಎಸ್ಟೇಟ್ ಸಮೀಪದ ಮುಖ್ಯರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಬೃಹತ್ ಸಿಲ್ವರ್ ಮರವೊಂದು ಮುಖ್ಯರಸ್ತೆಗೆ ಉರುಳಿದ್ದು, ರಸ್ತೆಯ ಮೇಲೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಬರುತ್ತಿದ್ದ ಸಂತೋಷ್ ಎಂಬುವರು ಕಾರಿನೊಳಗೆ ಇದ್ದು, ಏರ್‌ಬ್ಯಾಗ್ ತೆರೆದುಕೊಂಡ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ. ಮರ ಮುಖ್ಯರಸ್ತೆಗೆ ಬಿದ್ದ ಪರಿಣಾಮ ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಸ್ವಲ್ಪ ಅಂತರ ದಲ್ಲಿಯೇ ಮತ್ತೊಂದು ಕಾಡು ಜಾತಿ ಮರ ಸಹ ಉರುಳಿ ಬಿದ್ದಿದೆ. ಬಳಿಕ ಸ್ಥಳೀಯ ಎಸ್ಟೇಟ್ ಸಿಬ್ಬಂದಿ ಮುಖ್ಯರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಿದರು.ಮರ ಬಿದ್ದ ರಭಸಕ್ಕೆ ನಾಲ್ಕಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿದ್ದು, ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ಕಡಿತ ಗೊಂಡಿದೆ. ಮೆಣಸುಕೊಡಿಗೆ ಇಸ್ಮಾಯಿಲ್ ಎಂಬುವರ ಮನೆ ಶೆಡ್ ಮೇಲೆ ಭಾನುವಾರ ಬೆಳಿಗ್ಗೆ ಮರವೊಂದು ಉರುಳಿ ಹಾನಿಯಾಗಿದೆ.ಖಾಂಡ್ಯ ಹೋಬಳಿ ಗೌರಿಗಂಡಿ ಸಮೀಪದಲ್ಲಿಯೂ ಸಹ ಶನಿವಾರ ಸಂಜೆ ವೇಳೆಗೆ ಬೃಹತ್ ಮರವೊಂದು ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆಗೆ ಬಿದ್ದಿದ್ದು ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಸ್ಥಳೀಯರು ಮರ ತೆರವುಗೊಳಿಸಿದರು. ಇಲ್ಲಿ ಎರಡು ವಿದ್ಯುತ್ ಕಂಬಗಳು ತುಂಡಾಗಿವೆ. ಸಾರಗೋಡು ಸಮೀಪವೂ ವಿದ್ಯುತ್ ಕಂಬ ಹಾಗೂ ಮರ ಬಿದ್ದು ಹಾನಿಯಾಗಿದ್ದು, ಮೆಸ್ಕಾಂ ಅಧಿಕಾರಿಗಳೊಂದಿಗೆ ವಿಪತ್ತು ಘಟಕದ ಸೇವಕರು ಸೇರ್ಪಡೆಗೊಂಡು ಮರ ತೆರವುಗೊಳಿಸಿದರು.ಖಾಂಡ್ಯ ಹೋಬಳಿ ಬಿದರೆ ಗ್ರಾಪಂ ವ್ಯಾಪ್ತಿಯ ಬಿದರೆ ಗ್ರಾಮದ ಲೋಕಪ್ಪಗೌಡ ಎಂಬುವರ ಮನೆ ಭಾರೀ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದ್ದು, ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಪಂ ಸದಸ್ಯ ಸುರೇಶ್, ಗ್ರಾಮ ಲೆಕ್ಕಿಗ ಶಿವಕುಮಾರ್, ಗ್ರಾಪಂ ಕಾರ್ಯದರ್ಶಿ ಗೋಪಾಲ್ ಶೆಟ್ಟಿ, ವಿಪತ್ತು ಘಟಕದ ಸ್ವಯಂ ಸೇವಕ ವಿ.ಸಿ.ರಘುಪತಿ ಭೇಟಿ ನೀಡಿ ಪರಿಶೀಲಿಸಿದರು.

ಬಾಳೆಹೊನ್ನೂರು, ಖಾಂಡ್ಯ, ಸಂಗಮೇಶ್ವರಪೇಟೆ, ಹಿರೇಗದ್ದೆ, ಅರಳೀಕೊಪ್ಪ, ಹೇರೂರು, ಸೀಗೋಡು, ಮಾಗುಂಡಿ, ಬನ್ನೂರು, ಗಡಿಗೇಶ್ವರ ಮುಂತಾದ ಕಡೆಗಳಲ್ಲಿ ಮಳೆಯೊಂದಿಗೆ ಬಾರೀ ಪ್ರಮಾಣದ ಗಾಳಿ ಬೀಸುತ್ತಿದ್ದು, ಹಲವೆಡೆ ಮರಗಳು ಧರೆಗುರುಳಿವೆ.೨೧ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಭದ್ರಾ-ದೇವದಾನ ಎಸ್ಟೇಟ್ ಸಮೀಪದ ಮುಖ್ಯರಸ್ತೆಯಲ್ಲಿ ಕಾರಿನ ಮೇಲೆ ಮರ ಬಿದ್ದು ಜಖಂಡಗೊಂಡಿರುವುದು.೨೧ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಗೌರಿಗಂಡಿಯಲ್ಲಿ ಮುಖ್ಯರಸ್ತೆ ಮೇಲೆ ಮರ ಬಿದ್ದಿರುವುದನ್ನು ತೆರವುಗೊಳಿಸುತ್ತಿರುವುದು.

೨೧ಬಿಹೆಚ್‌ಆರ್ ೩:

ಬಾಳೆಹೊನ್ನೂರು ಸಮೀಪದ ಸಾರಗೋಡು ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿರುವುದು.