- ಡಿಸಿ ಗಂಗಾಧರ ಸ್ವಾಮಿ ಸೂಚನೆ । ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಮೇಲಿನ ನೀರಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಕಚೇರಿ ಹಾಗೂ ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಆಳವಡಿಸಿಕೊಳ್ಳೋದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ಜಿಲ್ಲಾಡಳಿತ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ, ನೆಲ-ಜಲ, ಪರಿಸರ ವೃದ್ಧಿಸಲು, ಮಳೆನೀರು ಕೊಯ್ಲಿ, ಸಸಿ ನೆಡುವುದು ಮತ್ತು ಜಿಲ್ಲಾ ಕೆರೆಗಳ ನಿರ್ವಹಣೆ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅಧಿಕಾರಿಗಳು ತಾವಿರುವ ಸ್ಥಳಗಳಲ್ಲಿ ಪರಿಸರಕ್ಕೆ ಕೊಡುಗೆ ನೀಡುವ ಮೂಲಕ ಮಾದರಿ ಆಗಬೇಕು. ನಮ್ಮ ಜಿಲ್ಲೆಯಾದ್ಯಂತ ಪರಿಸರ ಸಂರಕ್ಷಣೆ ಹಾಗೂ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲಾ- ಕಾಲೇಜುಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳ ಸಹಯೋಗದೊಂದಿಗೆ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮುಂಬರುವ ಜೂ.6ರಂದು ಕುಂದುವಾಡ ಕೆರೆ ಆವರಣದಲ್ಲಿ ವಾಕರ್ಸ್ ಅಸೋಸಿಯೇಷನ್ ವತಿಯಿಂದ ಸುಮಾರು 250 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೆಟ್ಟ ಸಸಿಗಳ ರಕ್ಷಣೆ ಜವಾಬ್ದಾರಿ ಅವರೇ ವಹಿಸಿಕೊಂಡಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ನಗರದಲ್ಲಿ ಕನಿಷ್ಠ ಒಂದು ವಾರ್ಡ್ ಅನ್ನಾದರೂ ಸರ್ವತೋಮುಖವಾಗಿ ಮಾದರಿ ವಾರ್ಡ್ ಆಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ, ಮಾದರಿ ವಾರ್ಡ್ ಕಲ್ಪನೆ, ಸ್ವಚ್ಛ ಗ್ರಾಮ, ಸ್ವಚ್ಛ ವಾರ್ಡ್ ನಿರ್ವಹಣೆ ಮತ್ತು ಸಸಿ ನಡುವ ಕಾರ್ಯಕ್ರಮಗಳ ಕುರಿತು ಸಮಗ್ರ ರೂಪರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ವಾರ್ಡ್‌ಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ ಸಂಗ್ರಹ ಆಗದಂತೆ ತಡೆದು, ಸಾರ್ವಜನಿಕರ ಸಾಮೂಹಿಕ ಬಳಕೆಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ತರಕಾರಿ ಗಿಡ ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಸುವ ವಿನೂತನ ಪರಿಕಲ್ಪನೆ ಜಾರಿಗೆ ತರಲು ಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಟೆರೇಸ್ ಗಾರ್ಡನ್ ನಿರ್ಮಾಣಕ್ಕೆ ಸಾರ್ವಜನಿಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಸ್ವಂತ ಮನೆ ಹೊಂದಿರುವ ಅಧಿಕಾರಿಗಳು ಸಹ ಇದನ್ನು ತಮ್ಮ ಮನೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬಹುದು. ಅದೇ ರೀತಿ, ಜಿಲ್ಲೆಯ ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಪದ್ಧತಿ ಕಡ್ಡಾಯವಾಗಿ ಜಾರಿಗೊಳಿಸಬೇಕು. ಕಚೇರಿಗಳಿಗೆ ಬರುವ ಆಡಳಿತಾತ್ಮಕ ಅನುದಾನವನ್ನು ಬಳಸಿ ಈ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ನಗರಕ್ಕೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿ, ಪಾಲಿಕೆಯ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ ಎಂದರು.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ತೀವ್ರವಾಗಿ ಕುಸಿದಿದೆ. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 11.89 ಮೀಟರ್ ಇದ್ದು ಪ್ರಸಕ್ತ ಅದು 2.29 ಮೀಟರ್‌ಗಳಷ್ಟು ಕುಸಿದಿದೆ. ಜಗಳೂರು ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 4.89 ಮೀಟರ್‌ಗಳಷ್ಟು ಅಂತರ್ಜಲಮಟ್ಟ ಕುಸಿದಿರುವುದು ಆತಂಕದ ಸಂಗತಿ. ಕುಂದುವಾಡ ಕೆರೆಗೆ ಮುಂದಿನ 2-3 ತಿಂಗಳು ನೀರು ಬರುವ ಸಾಧ್ಯತೆ ಇಲ್ಲದಿರುವುದರಿಂದ ಲಭ್ಯವಿರುವ ನೀರನ್ನೇ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

ರೈತರು ಪ್ರತಿವರ್ಷ ಮೆಕ್ಕೆಜೋಳವನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರಿಂದ ಮತ್ತು ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಬಳಕೆ ಕಾರಣ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ರೈತರು ಪರ್ಯಾಯ ಬೆಳೆಗಳಾದ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು. ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಂಪೂರ್ಣ ಕಟ್ಟಡದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ ಮತ್ತು ಜಿಲ್ಲಾ ಪಂಚಾಯಿತಿ ಕಟ್ಟಡದ ಅರ್ಧದಷ್ಟು ಭಾಗಕ್ಕೆ ಸೌರಶಕ್ತಿ ಸಂಪರ್ಕ ಕಲ್ಪಿಸಲಾಗಿದೆ. ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಸರಬರಾಜು ಮಾಡಲಾಗುತ್ತಿದೆ. ಎಸ್.ಪಿ. ಕಚೇರಿಯ ಲಭ್ಯವಿರುವ ಜಾಗದಲ್ಲಿ ಅಡಕೆ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇದೇ ಮಾದರಿಯನ್ನು ಜಿಲ್ಲೆಯ ಎಲ್ಲ ಇಲಾಖೆಗಳು ಹಾಗೂ ಅಧಿಕಾರಿಗಳು ತಮ್ಮ ಸ್ವಂತ ಮನೆಗಳಲ್ಲೂ ಅಳವಡಿಸಿಕೊಂಡು ಸಾರ್ವಜನಿಕರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಶಾಲಾ- ಕಾಲೇಜುಗಳು, ವಸತಿ ನಿಲಯಗಳು, ಸರ್ಕಾರಿ ಕಚೇರಿಗಳು, ಕಲ್ಯಾಣ ಮಂಟಪ ಮತ್ತು ಅತಿಥಿ ಗೃಹಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.

ದೇವರಾಜ ಅರಸು ಬಡಾವಣೆಯ ರೈಲ್ವೆ ಹಳಿ ಪಕ್ಕದ ಬಫರ್ ವಲಯದಲ್ಲಿ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರು ಸೇರಿ ಉತ್ತಮ ಉದ್ಯಾನವನ ನಿರ್ಮಿಸಿದ್ದಾರೆ. ಈ ಹಿಂದೆ ಆತ್ಮಹತ್ಯೆಗಳ ತಾಣವಾಗಿದ್ದ ಈ ಕಪ್ಪುಚುಕ್ಕೆ ಪ್ರದೇಶವನ್ನು ಈಗ ಸುಂದರ ಪಾರ್ಕ್ ಆಗಿ ಪರಿವರ್ತಿಸಲಾಗಿದೆ. ಸಾರ್ವಜನಿಕರ ಜಾಗೃತಿಯಿಂದಾಗಿ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ:

ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಕಳೆದ 3 ವರ್ಷಗಳಲ್ಲಿ ಸುಮಾರು 36 ಕೆರೆ ಮತ್ತು ಕುಂಟೆಗಳ ನಿರ್ಮಾಣ ಹಾಗೂ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ವರ್ಷವೂ ₹10 ಕೋಟಿ ವೆಚ್ಚದಲ್ಲಿ ಮತ್ತಷ್ಟು ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.

ಮುದ್ದಪ್ಪನ ಕೆರೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಸದರಿ ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ಯಾವುದೇ ಕ್ರಮವಹಿಸಿಲ್ಲ ಎಂದು ಪರಿಸರವಾದಿ ಬಲ್ಲೂರು ರವಿಕುಮಾರ ಸಭೆಯ ಗಮನಕ್ಕೆ ತಂದರು. ಮುದ್ದಪ್ಪನ ಕೆರೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕೆರೆಯ ಅಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡಿದ್ದು, ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯಲಿದೆ. ಇದರಿಂದ ಸುಮಾರು ಪ್ರಾಣಿ- ಪಕ್ಷಿಗಳಿಗೆ ನೀರು ಆಹಾರ ಸಿಗಲಿದೆ ಎಂದು ತಿಳಿಸಿದರು.

ನೀರು ಪೋಲು ವಿರುದ್ಧ ಕಠಿಣ ಕ್ರಮ:

ನಗರದಲ್ಲಿ ಬೆಳಗಿನ ಅವಧಿಯಲ್ಲಿ ವಾಹನಗಳನ್ನು ತೊಳೆಯಲು ಹಾಗೂ ಮನೆ ಮುಂದಿನ ರಸ್ತೆಗಳಿಗೆ ಪೈಪ್‌ಗಳ ಮೂಲಕ ನೂರಾರು ಲೀಟರ್ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವುದು ಕಂಡುಬಂದಿದೆ. ಇಂತಹ ಕೃತ್ಯಗಳಿಂದಾಗಿ ಡಾಂಬರು ರಸ್ತೆಗಳು ಹಾಳಾಗುತ್ತಿವೆ. ನೀರನ್ನು ಪೋಲು ಮಾಡುವ ಮನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಾಲಿಕೆಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಅಂತಹ ಮನೆಗಳಿಗೆ ಭಾರಿ ಮೊತ್ತದ ದಂಡ ವಿಧಿಸುವುದರ ಜೊತೆಗೆ ನೀರಿನ ಸಂಪರ್ಕವನ್ನೇ ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ಡಿಸಿ ಹೇಳಿದರು.

ಸಭೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್, ದುಡಾ ಆಯುಕ್ತೆ ರೇಣುಕ, ಮಹಾನಗರ ಪಾಲಿಕೆ ರೆವಿನ್ಯೂ ಆಯುಕ್ತ ಉದಯ್, ಡಿಡಿಪಿಯು ಪಳಿನಿವೇಲು, ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌)

* "ಮೆಮೊರಿ ಟ್ರೀ " ವಿನೂತನ ಪರಿಕಲ್ಪನೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಸಾರ್ವಜನಿಕರಲ್ಲಿ ಪರಿಸರ ಪ್ರೇಮ ಹೆಚ್ಚಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ''''ಮೆಮೊರಿ ಟ್ರೀ'''' (ಸ್ಮರಣಾರ್ಥ ಗಿಡ) ಎಂಬ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ. ತಮ್ಮ ಕುಟುಂಬದ ಹಿರಿಯರು ಅಥವಾ ಮರಣ ಹೊಂದಿದವರ ಸವಿನೆನಪಿನಲ್ಲಿ ಸಾರ್ವಜನಿಕರು ಗಿಡಗಳನ್ನು ನೆಡಬಹುದು. ಈ ಗಿಡಗಳಿಗೆ ಅವರ ಹೆಸರಿನ ಫಲಕವನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಗಿಡಗಳ ಮೇಲಿನ ಭಾವನಾತ್ಮಕ ಸಂಬಂಧ ಹೆಚ್ಚಲಿದ್ದು, ಗಿಡಗಳ ರಕ್ಷಣೆಯೂ ಸುಲಭವಾಗುತ್ತದೆ. ಹುಟ್ಟುಹಬ್ಬದ ನೆನಪಿಗಾಗಿಯೂ ಇಂತಹ ಗಿಡಗಳನ್ನು ನೆಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ನಗರದಲ್ಲಿ ತೆಂಗಿನ ಗರಿಗಳು, ಅಡಕೆ ಸಿಪ್ಪೆ ಹಾಗೂ ಒಣಗಿದ ರೆಂಬೆಗಳ ವಿಲೇವಾರಿ ದೊಡ್ಡ ಸಮಸ್ಯೆ ಆಗಿರುವುದನ್ನು ಪರಿಸರವಾದಿ ಈಶ್ವರಯ್ಯ ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಇಂತಹ ತ್ಯಾಜ್ಯಗಳನ್ನು ಸುಲಭವಾಗಿ ಪುಡಿ ಮಾಡುವ ಯಂತ್ರಗಳನ್ನು ಖರೀದಿಸಿ, ಅವುಗಳನ್ನು ಸ್ತ್ರೀಶಕ್ತಿ ಸಂಘಗಳಿಗೆ ಹಸ್ತಾಂತರಿಸುವುದಾಗಿ ತಿಳಿಸಿದರು. ಈ ಯಂತ್ರಗಳ ನಿರ್ವಹಣೆಯ ಜವಾಬ್ದಾರಿ ಸ್ತ್ರೀಶಕ್ತಿ ಸಂಘಗಳಿಗೆ ವಹಿಸುವುದರಿಂದ ಅವರಿಗೆ ಸ್ವಯಂ ಉದ್ಯೋಗ ಅವಕಾಶವೂ ದೊರೆಯುವುದಲ್ಲದೇ, ಯಂತ್ರದಿಂದ ಉತ್ಪಾದನೆ ಆಗುವ ಪುಡಿಯನ್ನು ಅತ್ಯುತ್ತಮ ಗೊಬ್ಬರವನ್ನಾಗಿ ಪರಿವರ್ತಿಸಿ ಮರುಬಳಕೆ ಮಾಡಲು ಸಾಧ್ಯ ಎಂದರು.

- - -

-2ಕೆಡಿವಿಜಿ43: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ನೆಲ-ಜಲ, ಪರಿಸರ ವೃದ್ಧಿಸಲು, ಮಳೆ ನೀರು ಕೊಯ್ಲಿ, ಸಸಿ ನೆಡುವುದು ಮತ್ತು ಜಿಲ್ಲಾ ಕೆರೆಗಳ ನಿರ್ವಹಣೆ ಕುರಿತ ಸಭೆ ನಡೆಯಿತು.