ಸಾರಾಂಶ
ಹಗರಿಬೊಮ್ಮನಹಳ್ಳಿ: ಪಟ್ಟಣದ ದೇವರಾಜ ಅರಸು ವಸತಿನಿಲಯದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಹಾಗೂ ಜನವಾದಿ ಮಹಿಳಾ ಸಂಘಟನೆ ಸಹಯೋಗದೊಂದಿಗೆ ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆಯ ಅಂಗವಾಗಿ ಸಾವಿತ್ರಿ ಬಾಪುಲೆ ನಡೆದು ಬಂದ ದಾರಿ ಮತ್ತು ಪ್ರಸ್ತುತ ಮಹಿಳೆಯರ ಸ್ಥಿತಿಗತಿ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಡಾ.ದೊಡ್ಡಬಸವರಾಜ್ ಗುಳೇದಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಹಿಳೆ ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಸಾವಿತ್ರಿ ಬಾಪುಲೆ ಅವರ ಮಹದಾಸೆಯಾಗಿತ್ತು. ಮಹಿಳೆಯರಿಗೋಸ್ಕರ ಸಾವಿತ್ರಿ ಬಾಪುಲೆ ಅನೇಕ ಅವಮಾನಗಳನ್ನು ಅನುಭವಿಸಿ, ದೊಡ್ಡಮಟ್ಟದ ಶಕ್ತಿಯಾಗಿ ಬೆಳೆದಿದ್ದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರು ಅನಾವಶ್ಯಕವಾಗಿ ಮೊಬೈಲ್ ಬಳಕೆಯಲ್ಲಿ ಹೆಚ್ಚು ತೊಡಗಿ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಸಾವಿತ್ರಿ ಬಾಪುಲೆ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರಂಗನಾಥ್ ಹವಾಲ್ದಾರ್ ಮಾತನಾಡಿ, ಸಾವಿತ್ರಿ ಬಾಪುಲೆ ಸಮಾಜದ ತೃತೀಯ ದರ್ಜೆಯಲ್ಲಿ ಇದ್ದಂತಹ ಮಹಿಳೆಯರಿಗೆ ಶಿಕ್ಷಣವನ್ನು ನೀಡುವುದರ ಮುಖಾಂತರ ಹೊಸ ಕ್ರಾಂತಿಗೆ ನಾಂದಿ ಹಾಡಿದರು. ಸಾವಿತ್ರಿ ಬಾಪುಲೆ ಅವರ ಯಶಸ್ಸಿನ ಹಿಂದೆ ಅವರ ಪತಿ ಜ್ಯೋತಿಬಾಪುಲೆ ಬೆಂಬಲ ದೊಡ್ಡ ಮಟ್ಟಕ್ಕೆ ಇತ್ತು. ಸತ್ಯಶೋಧಕ ಸಂಘಟನೆಯಿಂದ ನಡೆಸಿದಂತಹ ಶೈಕ್ಷಣಿಕ ಕ್ರಾಂತಿ, ಮಹಿಳಾ ಕ್ರಾಂತಿ ಅವಿಸ್ಮರಣೀಯವಾಗಿವೆ ಎಂದರು.
ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಜಯಸೂರ್ಯ, ಜನವಾದಿ ಮಹಿಳಾ ಸಂಘಟನೆಯ ತಾಲೂಕು ಕಾರ್ಯದರ್ಶಿ ಸರ್ದಾರ ಹುಲಿಗೆಮ್ಮ, ಪ್ರಾಂತ ರೈತ ಸಂಘಟನೆಯ ಮಲ್ಲಿಕಾರ್ಜುನ ಕೊಟಿಗಿ ಮಾತನಾಡಿದರು. ಎಸ್‌ಎಫ್‌ಐನ ಪುಷ್ಪಾವತಿ ಇದ್ದರು. ಕಾರ್ಯಕ್ರಮವನ್ನು ಎಸ್‌ಎಫ್‌ಐನ ಸಂಜನಾ, ಅನುಷಾ, ಸಂತೋಷ ನಿರ್ವಹಿಸಿದರು.ಹಗರಿಬೊಮ್ಮನಹಳ್ಳಿಯಲ್ಲಿ ಎಸ್‌ಎಫ್‌ಐ ಹಾಗೂ ಜನವಾದಿ ಮಹಿಳಾ ಸಂಘಟನೆಯಿಂದ ಸಾವಿತ್ರಿ ಬಾಪುಲೆ ನಡೆದು ಬಂದ ದಾರಿ ಮತ್ತು ಪ್ರಸ್ತುತ ಮಹಿಳೆಯರ ಸ್ಥಿತಿಗತಿ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.