ಕನ್ನಡಪ್ರಭ ವಾರ್ತೆ ಮೈಸೂರು
ರೈತರು ಸಿರಿಧಾನ್ಯ ಬೆಳೆಗಳಲ್ಲಿ ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಿ ಎಂದು ವಿಸ್ತರಣಾ ನಿರ್ದೇಶಕ ಡಾ.ಸಿ. ರಾಮಚಂದ್ರ ಕರೆ ನೀಡಿದರು.ಜಿಲ್ಲೆಯ ಹುಣಸೂರು ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿಸ್ತರಣಾ ನಿರ್ದೇಶನಾಲಯ, ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಹಾಗೂ ವಿಸ್ತರಣಾ ಶಿಕ್ಷಣ ಘಟಕ ನಾಗನಹಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ಸಿರಿಧಾನ್ಯಗಳ ಮಹತ್ವ ಹಾಗೂ ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯ ಆರೋಗ್ಯ ಹಾಗೂ ಭವಿಷ್ಯದ ಆಹಾರ ಭದ್ರತೆಯ ದೃಷ್ಟಿಯಿಂದ ಸಿರಿಧಾನ್ಯಗಳು ಅತ್ಯಂತ ಮಹತ್ವದ ಬೆಳೆಗಳಾಗಿವೆ. ಸಿರಿಧಾನ್ಯಗಳನ್ನು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಸಿ ಉತ್ತಮ ಇಳುವರಿ ಪಡೆಯುವುದರ ಜೊತೆಗೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಇರುವುದರಿಂದ ರೈತರು ಸಿರಿಧಾನ್ಯಗಳ, ಅದರಲ್ಲೂ ವಿಶೇಷವಾಗಿ ರಾಗಿಯ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವೈಜ್ಞಾನಿಕವಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ರಾಗಿಯನ್ನು ಸುಧಾರಿತ ಹಾಗೂ ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬೆಳೆದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ಗಳಿಸಬಹುದು. ಪ್ರಸ್ತುತ ರಾಗಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭ್ಯವಿರುವುದರಿಂದ ರೈತರು ಗುಣಮಟ್ಟದ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ರಾಗಿಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಹೆಚ್ಚಿನ ಅವಕಾಶಗಳಿದ್ದು, ಸ್ವಸಹಾಯ ಸಂಘಗಳು ಹಾಗೂ ರೈತ ಉತ್ಪಾದಕರ ಕಂಪನಿಗಳು ರಾಗಿಯಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ಉತ್ತಮ ಆದಾಯ ಗಳಿಸಬಹುದಾಗಿದೆ ಎಂದರು.
ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಡಾ. ಪ್ರಕಾಶ್ ಅವರು, ರಾಗಿ ಬೆಳೆಯ ಉತ್ಪಾದಕತೆ, ಅದರ ಮಹತ್ವ ಹಾಗೂ ಸಂಸ್ಕರಣಾ ವಿಧಾನಗಳ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಿದರು.
ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್. ಮೌಲ್ಯ ಅವರು, ರಾಗಿ ಬೆಳೆಯಲ್ಲಿ ಕಂಡು ಬರುವ ಪ್ರಮುಖ ಕೀಟ ಹಾಗೂ ರೋಗಗಳ ಗುರುತಿಸುವಿಕೆ ಮತ್ತು ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ತಿಳಿಸಿದರು.ಸಹಾಯಕ ಪ್ರಾಧ್ಯಾಪಕ ಡಾ.ಪಿ.ಅರುಣ್ ಕುಮಾರ್ ಅವರು, ಸಿರಿಧಾನ್ಯಗಳ ಪೌಷ್ಟಿಕ, ರಾಗಿಯ ಮೌಲ್ಯವರ್ಧನೆ, ಮಾರುಕಟ್ಟೆ ಅವಕಾಶಗಳು ಮತ್ತು ಸಿರಿಧಾನ್ಯಗಳ ಬಳಕೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ ಸಿರಿಧಾನ್ಯಗಳ ಯೋಜನೆಯಡಿ ಆಯ್ಕೆಯಾದ ಪ್ರಗತಿಪರ ರೈತರು, ರೈತ ಮಹಿಳೆಯರು ಹಾಗೂ ಯುವಕರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ವಿಸ್ತರಣಾ ಶಿಕ್ಷಣ ಘಟಕದ ಡಾ.ಶಿವಕುಮಾರ್, ಧರಣೇಶ್ ಹಾಗೂ ಸಿಬ್ಬಂದಿ ಇದ್ದರು.