ಹಿರೇಕೆರೂರು ಪಟ್ಟಣದ ಸಿಇಎಸ್ ಸಂಸ್ಥೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಹಿರೇಕೆರೂರು: ವಿವೇಕಾನಂದರು ತಮ್ಮ ಜ್ಞಾನ ಭಂಡಾರದಿಂದಲೇ ಆಕರ್ಷಿತರಾದವರು. ಅವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಸಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

ಪಟ್ಟಣದ ಸಿಇಎಸ್ ಸಂಸ್ಥೆಯ ಆವರಣದಲ್ಲಿ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಕಾಲೇಜು, ಜಗದ್ಗುರು ತರಳಬಾಳು ಶಿಕ್ಷಣ ಮಹಾವಿದ್ಯಾಲಯ ಕೆ.ಎಚ್. ಪಾಟೀಲ ಪಿಯು ಕಾಲೇಜು ಹಾಗೂ ರಾಷ್ಟ್ರೋತ್ಥಾನ ಪರಿಷತ್‌ನ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ವಿಶ್ವದೆಲ್ಲೆಡೆ ವಿಶ್ವ ಮಾನವ ಸಂದೇಶವನ್ನು ನೀಡಿದ ಪ್ರತಿಭಾವಂತರು. ಭಾರತ ದೇಶದಲ್ಲಿ ಶತಮಾನಗಳಿಂದ ನಡೆದು ಬಂದ ಹಿಂದೂ ಧರ್ಮದ ಸಾರವನ್ನು ಜಗತ್ತಿಗೆ ತಿಳಿಸಿದ ಮಹಾನುಭಾವರು ಎಂದರು.

ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ನೀವು ನಿಮ್ಮ ಮೇಲೆ ನಂಬಿಕೆ ಇಟ್ಟರೆ, ಜಗತ್ತು ನಿಮ್ಮ ಮೇಲೆ ನಂಬಿಕೆ ಇಡುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಯುವಕರು ತಮ್ಮ ಶಕ್ತಿಯನ್ನು ಅರಿತು ಧೈರ್ಯವಾಗಿ ಮುಂದೆ ಸಾಗಬೇಕು ಎಂದರು.

ರಾಣಿಬೆನ್ನೂರು ರಾಮಕೃಷ್ಣ ಆಶ್ರಮದ ವಿಜಯಾನಂದ ಮಹಾರಾಜರು ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇದ್ದರೆ ಮಾತ್ರ ಸಾಧನೆ ಸಾಧ್ಯ. ಸ್ವಾಮಿ ವಿವೇಕಾನಂದರು ಸ್ಫೂರ್ತಿದಾಯಕರಾಗಿದ್ದಾರೆ ಎಂದರು.

ರಾಷ್ಟ್ರೋತ್ಥಾನ ಪರಿಷತ್‌ನ ಜಿಲ್ಲಾ ಸಂಯೋಜಕ ರಾಘವೇಂದ್ರ, ಸಿಇಎಸ್ ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ ಪ್ರಾಚಾರ್ಯ ಡಾ. ನಾನಾಸಾಹೇಬ ಹಚ್ಚಡದ, ಬಿ.ಪಿ. ಹಳ್ಳೇರ, ಕೆ.ಎಚ್. ಮಾವಿನತೋಪ ಇದ್ದರು.