ವೀರ ರಾಣಿ ಚನ್ನಮ್ಮ ಆದರ್ಶ ಅಳವಡಿಸಿಕೊಳ್ಳಿ: ಎನ್.ಜೆ.ಮಂಜುನಾಥ

| Published : Nov 20 2025, 03:00 AM IST

ವೀರ ರಾಣಿ ಚನ್ನಮ್ಮ ಆದರ್ಶ ಅಳವಡಿಸಿಕೊಳ್ಳಿ: ಎನ್.ಜೆ.ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಪ್ರಪ್ರಥಮ ಸ್ವಾತಂತ್ರ‍್ಯ ಹೋರಾಟಗಾರ್ತಿ ವೀರ ರಾಣಿ ಚನ್ನಮ್ಮ ಪಂಚಮಸಾಲಿಗಳ ಮನೆ ದೇವತೆ. ನಾವೆಲ್ಲರೂ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಮುಖಿ ಕಾರ್ಯ ಮಾಡಬೇಕು ಎಂದು ಶಿಕ್ಷಕ ಎನ್.ಜೆ.ಮಂಜುನಾಥ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತದ ಪ್ರಪ್ರಥಮ ಸ್ವಾತಂತ್ರ‍್ಯ ಹೋರಾಟಗಾರ್ತಿ ವೀರ ರಾಣಿ ಚನ್ನಮ್ಮ ಪಂಚಮಸಾಲಿಗಳ ಮನೆ ದೇವತೆ. ನಾವೆಲ್ಲರೂ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಮುಖಿ ಕಾರ್ಯ ಮಾಡಬೇಕು ಎಂದು ಶಿಕ್ಷಕ ಎನ್.ಜೆ.ಮಂಜುನಾಥ ಸಲಹೆ ನೀಡಿದರು.

ನಗರದ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಯುವ ಘಟಕ, ನಗರ ಯುವ ಘಟಕಗಳಿಂದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ಕಿತ್ತೂರು ರಾಣೆ ಚನ್ನಮ್ಮ 247ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಬ್ರಿಟಿಷರ ಬಹು ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ ಆ ಮಹಿಳೆ ಇಡೀ ಜಗತ್ತಿನಾದ್ಯಂತ ವೀರ ರಾಣಿ ಎನಿಸಿದ್ದಾರೆ. ಚೆನ್ನಮ್ಮ ತನ್ನ ಸ್ವತಂತ್ರ ರಾಜ್ಯದ ರಕ್ಷಣೆಗಾಗಿ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಟ ನಡೆಸಿದ್ದರು. ದೇಶಭಕ್ತಿ, ಶೌರ್ಯ, ಸಾಹಸಕ್ಕೆ ಹೆಸರಾಗಿದ್ದರು. ಅವರ ಹೋರಾಟದಿಂದಾಗಿಯೇ ಕಿತ್ತೂರು ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.

ಎರಡು ಸಾವಿರ ಇತಿಹಾಸ ಹೊಂದಿ ಎಂಟು ಜ್ಞಾನ ಪೀಠ ಪಡೆದ ಏಕೈಕ ಭಾಷೆ ಕನ್ನಡ ಭಾಷೆಯಾಗಿದೆ. ನಾವೆಲ್ಲರೂ ಕನ್ನಡ ಉಳಿಸಿ- ಕನ್ನಡ ಬೆಳೆಸಿ ಎನ್ನುವುದನ್ನು ನಿಲ್ಲಿಸಿ ಕನ್ನಡವನ್ನು ಬಳಸಿ ಬೆಳಸುವ ಕೆಲಸವಾಗಬೇಕಿದೆ ಎಂದರು.

ನೆಹರೂ ಅವರು ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು ಮತ್ತು ದೇಶದ ಭವಿಷ್ಯಕ್ಕೆ ಮಕ್ಕಳೇ ಅಡಿಪಾಯ ಎಂದು ಬಲವಾಗಿ ನಂಬಿದ್ದರು. ಮಕ್ಕಳ ಹಕ್ಕುಗಳು, ಅವರ ಸುರಕ್ಷತೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಈ ದಿನ ನಮಗೆ ನೆನಪಿಸುತ್ತದೆ ಎಂದರು.

ಸಂತೇಬೆನ್ನೂರು ವಿಜಯ ಕರ್ನಾಟಕ ವರದಿಗಾರ ಎಸ್.ಜೆ.ಕಿರಣ್ ಮಾತನಾಡಿ, ಗ್ರಾಮೀಣ ಪ್ರದೇಶದ ನನ್ನನ್ನು ಗುರುತಿಸಿ ಇಂದು ಪಂಚಮಸಾಲಿ ಸಮಾಜ ಸನ್ಮಾನ ಮಾಡಿದ್ದು ನನಗೆ ಹರ್ಷ ತಂದಿದೆ. ಇದೇ ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸಿದರೆ, ಅವರೂ ಕೂಡ ಸಮಾಜದ ಸಂಘಟನೆಗೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಚುನಾಯಿತರಾದ ಜನತಾ ಬಜಾರ್ ಅಧ್ಯಕ್ಷ ವಿ.ಮಂಜುನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಜೆ.ಎಸ್.ವೀರೇಶ್, ನಿರ್ದೇಶಕರಾದ ಎಂ.ಎಸ್.ಚನ್ನಬಸವ ಶೀಲವಂತ್, ಎಸ್.ಜೆ.ಕಿರಣ್ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳ ದಿನಾಚರಣೆ ಅಂಗವಾಗಿ ಸಮಾಜದ ಆರು ವರ್ಷದೊಳಗಿನ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ಬಹುಮಾನ ವಿತರಿಸಿದರು.

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ, ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರ ಯುವ ಘಟಕದ ಅಧ್ಯಕ್ಷ ಅಂಗಡಿ ಸ್ವರೂಪ ಇತರರು ಇದ್ದರು.